ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ ಆಗಬೇಕು ಎಂಬ ಕನಸು ಕಂಡು ಸೈಕಲ್ ತುಳಿದು ಅಯೋಧ್ಯೆಗೆ ಹೋಗಿ ರಾಯ್‌ಬರೇಲಿ ಜೈಲಿನಲ್ಲಿದ್ದೆ. ಆದರೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದೀಗ ಶ್ರೀರಾಮಲಲ್ಲಾ ಮೂರ್ತಿಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ತುಂಬ ಸಂತಸವಾಗಿದೆ ಎಂದು ಕಲ್ಲೂರ ಗ್ರಾಮದ ಬಿಜೆಪಿ ಹಿರಿಯ ಮುಖಂಡ ಭೀಮಶೆಟ್ಟಿ ಮುಕ್ಕಾ ಹೇಳಿದ್ದಾರೆ.ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಕಲ್ಲೂರ ಗ್ರಾಮದಿಂದ ೨೦೦೩ರಲ್ಲಿ ನಮ್ಮ ಊರಿನ ಯುವಕರಾದ ವಿಜಯಕುಮಾರ ಪರೀಟ, ರವಿಕುಮಾರ ತಳವಾರ, ವಿಜಯಕುಮಾರ ಮರಾಠ ಮತ್ತು ನಿಡಗುಂದಾ ಗ್ರಾಮದ ಶಾಮರಾವ ಅವರೊಂದಿಗೆ ಅಯೋಧ್ಯೆ ಹೋದೆವು. ಅಲ್ಲಿ ಬಸ್‌ನಲ್ಲಿ ಕರೆದುಕೊಂಡು ಹೋಗಿ ಜೈಲಿನಲ್ಲಿ ಹಾಕಿ ಹತ್ತು ದಿನಗಳ ನಂತರ ಬಿಡುಗಡೆ ಮಾಡಿದಾಗ ಕೈಮೇಲೆ ಮೊಹರು ಹಾಕಿದ್ದರು.
೨೦೦೨ರಲ್ಲಿ ಕಲ್ಲೂರ ಗ್ರಾಮದಿಂದ ಏಕಾಂಗಿಯಾಗಿ ಸೈಕಲ್ ಯಾತ್ರೆ ನಡೆಸಿ ರಾಮಜನ್ಮಭೂಮಿಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲ್ಲೂರರೋಡ, ಚಿಂಚೋಳಿ, ಬೀದರ್, ಭಾಲ್ಕಿ, ನಾಂದೇಡ (ಮಹಾರಾಷ್ಟ್ರ) ಜಬಲಪೂರ (ಮಧ್ಯಪ್ರದೇಶ) ಮೂಲಕ ಉತ್ತರ ಪ್ರದೇಶ ರಾಜ್ಯದ ಪ್ರಯಾಗ್ ಮೂಲಕ ಅಯೋಧ್ಯೆಗೆ ಹೋಗಿದ್ದೇವೆ ಎಂದು ಹೇಳಿದರು.ಅಯೋಧ್ಯೆಯಲ್ಲಿ ಶಿಲಾದಾನ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ಸೈಕಲ್‌ನಲ್ಲೆ ಕಾಶಿ, ಬಿಹಾರ ಬುದ್ದಗಯಾ, ಪಶ್ಚಿಮ ಬಂಗಾಲ ಕೋಲ್ಕತ್ತಾಕ್ಕೆ ಹೋಗಿ ಐತಿಹಾಸಿಕ ದೇವಸ್ಥಾನ ಕಾಳಿಕಾದೇವಿ ದರ್ಶನ ಪಡೆದು ಸ್ವಗ್ರಾಮಕ್ಕೆ ಬಂದು ತಲುಪಿದ್ದೇವೆ. ಅಯೋಧ್ಯೆಗೆ ಹೋಗಲು ೫೬ ದಿವಸಗಳಲ್ಲಿ ೪ ಸಾವಿರ ಕಿ.ಮೀ. ಸೈಕಲ್‌ನಲ್ಲೆ ಏಕಾಂಗಿಯಾಗಿ ಯಾತ್ರೆ ನಡೆಸಿದ್ದೇನೆ. ಪ್ರತಿನಿತ್ಯ ೧೦೦-೧೫೦ಕಿಮಿ ಸಂಚರಿಸಿದ್ದೇನೆ ಎಂದು ಸ್ಮರಿಸಿದರು.ಅಯೋಧ್ಯೆ ರಾಮಮಂದಿರ ನಿರ್ಮಾಣದಿಂದಾಗಿ ದೇಶದ ಮತ್ತು ವಿದೇಶದ ಶ್ರೀರಾಮನ ಭಕ್ತರು ಕಂಡಿದ್ದ ಕನಸು ಇದೀಗ ನನಸಾಗುತ್ತಿದೆ. ೧೯೯೨ರಲ್ಲಿ ಕರಸೇವಕರಾಗಿ ವಿಧಾನಪರಿಷತ್ ಸದಸ್ಯ ದಿ.ಎಂ.ಆರ್. ತಂಗಾ ನೇತೃತ್ವದಲ್ಲಿ ರೈಲಿನ ಮೂಲಕ ಅಯೋಧ್ಯೆಗೆ ಹೋಗಿ ರಾಮಜನ್ಮಭೂಮಿಯ ಬಾಬ್ರಿ ಮಸೀದಿ ಧ್ವಂಸಕ್ಕೂ ಮೊದಲೆ ಡಿ.೪ರಂದು ಅಯೋಧ್ಯೆಯಲ್ಲಿದ್ದೇವೆ. ರಾಮ ಮಂದಿರ ನಿರ್ಮಾಣಕ್ಕಾಗಿ ನಿರಂತರವಾಗಿ ವಿವಿಧ ಹೋರಾಟದಲ್ಲಿ ಭಾಗವಹಿಸಿದ್ದೇನೆ ಎಂದು ಕಲ್ಲೂರಗ್ರಾಮದ ಬಿಜೆಪಿ ಮುಖಂಡ ಭೀಮಶೆಟ್ಟಿ ಮುಕ್ಕಾ ಸಂತಸ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))