ಪೌರಕಾರ್ಮಿಕರ ವಿಶ್ರಾಂತಿಗೆ ಬಂದಿವೆ ''ಭೀಮಾಶ್ರಯ''

| Published : Oct 09 2023, 12:47 AM IST

ಪೌರಕಾರ್ಮಿಕರ ವಿಶ್ರಾಂತಿಗೆ ಬಂದಿವೆ ''ಭೀಮಾಶ್ರಯ''
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ವಿಶ್ರಾಂತಿಗಾಗಿ ಭೀಮಾಶ್ರಯ ತಂಗುದಾಣಗಳನ್ನು ಸ್ಥಾಪಿಸಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ವಿಶ್ರಾಂತಿಗಾಗಿ ಭೀಮಾಶ್ರಯ ತಂಗುದಾಣಗಳನ್ನು ಸ್ಥಾಪಿಸಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶ್ರಾಂತಿ ತಾಣಗಳನ್ನು ನಿರ್ಮಿಸಲಾಗಿದೆ.

ಪ್ರತಿ ವಲಯಕ್ಕೊಂದು ನಿರ್ಮಿಸಿರುವ ಈ ಭೀಮಾಶ್ರಯ ತಂಗುದಾಣಗಳ ನಿರ್ಮಾಣಕ್ಕೆ ₹2.4 ಕೋಟಿ ಪಾಲಿಕೆ ಖರ್ಚು ಮಾಡಿದೆ.

ಏನೇನಿವೆ?

ಪೌರಕಾರ್ಮಿಕರು ಬೆಳಗ್ಗೆ 5 ಗಂಟೆಗೆ ಕೆಲಸಕ್ಕೆ ಹಾಜರಾಗಿರುತ್ತಾರೆ. ಮಧ್ಯಾಹ್ನದ ವರೆಗೂ ಅವರಿಗೆ ಕೆಲಸ ಇದ್ದೇ ಇರುತ್ತದೆ. ಮಧ್ಯೆ ಉಪಾಹಾರ ಸೇವಿಸಬೇಕು. ಪಾಲಿಕೆಯೇನೋ ಉಪಾಹಾರ ನೀಡುತ್ತದೆ. ಆದರೆ ಎಲ್ಲಿ ಕುಳಿತು ಸೇವಿಸಬೇಕು? ರಸ್ತೆ ಬದಿಯಲ್ಲೋ, ಗಿಡದ ನೆರಳಿನಲ್ಲೋ ಕುಳಿತು ಉಪಾಹಾರ ಸೇವಿಸುತ್ತಿದ್ದರು. ಇನ್ನು ಬೆಳಗ್ಗೆಯಿಂದ ಕಸ ಎತ್ತಿರುತ್ತಾರೆ. ಕೈಕಾಲು ಮುಖ ತೊಳೆದುಕೊಳ್ಳಬೇಕು ಎಂದರೂ ಕಷ್ಟವಾಗುತ್ತಿತ್ತು. ಡ್ಯೂಟಿ ಮುಗಿದ ಮೇಲೆ ಬಟ್ಟೆ ಬದಲಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಅವರಿಗಾಗಿ ಪ್ರತ್ಯೇಕ ವಿಶ್ರಾಂತಿ ತಾಣ ಮಾಡಬೇಕೆಂಬ ಬೇಡಿಕೆ ಬಹುದಿನಗಳಿಂದ ಇತ್ತು.

ಸರ್ಕಾರ ಕೂಡ ವಿಶ್ರಾಂತಿ ತಂಗುದಾಣಗಳನ್ನಾಗಿ ಮಾಡಿಕೊಡಿ ಎಂದು ಆದೇಶಿಸಿತ್ತು. ಅದರಂತೆ ಪ್ರತಿವಲಯಕ್ಕೆ ಎರಡರಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 25 ವಿಶ್ರಾಂತಿ ತಂಗುದಾಣಗಳನ್ನಾಗಿ ಮಾಡಿ ಪೌರಕಾರ್ಮಿಕರಿಗೆ ನೀಡಿದೆ. ಈ ಪೈಕಿ ಹುಬ್ಬಳ್ಳಿಯಲ್ಲಿ 17, ಧಾರವಾಡದಲ್ಲಿ 8 ತಂಗುದಾಣ ಮಾಡಲಾಗಿದೆ. ಇವುಗಳಿಗೆ ಭೀಮಾಶ್ರಯ ಎಂದು ಹೆಸರಿಸಲಾಗಿದೆ.

ಇಲ್ಲಿ ಶೌಚಾಲಯ, ಬಾತ್‌ರೂಮ್‌, ಕನ್ನಡಿಯೊಂದಿಗೆ ಬಟ್ಟೆ ಬದಲಿಸಿಕೊಳ್ಳಲು ಪ್ರತ್ಯೇಕ ಕೊಠಡಿ, ಉಪಾಹಾರ ಸೇವಿಸಲು ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಸಕಲ ಸೌಕರ್ಯಗಳು ಈ ಕಂಟೇನರ್‌ಗಳಲ್ಲಿ ಇದೆ. ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಮಳೆ ಗಾಳಿ ಬಂದರೂ ಇಲ್ಲಿ ಆಶ್ರಯ ಪಡೆಯಬಹುದು. ಜತೆಗೆ ಯಾರಾದರೂ ಪೌರಕಾರ್ಮಿಕರಿಗೆ ಹುಷಾರಿರಲಿಲ್ಲವೆಂದರೆ ಇಲ್ಲಿ ವಿಶ್ರಾಂತಿ ಪಡೆಯಲು ಅನುಕೂಲಕರವಾಗಿದೆ.

ಬಿಬಿಎಂಪಿಯಲ್ಲಿ ಇಂತಹ ವಿಶ್ರಾಂತಿ ತಾಣಗಳನ್ನು ಪರಿಚಯಿಸಿತ್ತು. ಅದೇ ಮಾದರಿಯಲ್ಲೀಗ ಎಚ್‌ಡಿಎಂಸಿಯೂ ಪರಿಚಯಿಸಿದೆ. ಕಳೆದ ವಾರವಷ್ಟೇ ಕೆಲವೊಂದಿಷ್ಟು ಭೀಮಾಶ್ರಯಗಳನ್ನು ಉದ್ಘಾಟಿಸಲಾಗಿದೆ. ಇನ್ನು ಕೆಲವು ಭೀಮಾಶ್ರಯಗಳನ್ನು ಉದ್ಘಾಟಿಸುವುದು ಬಾಕಿಯುಳಿದಿದೆ. ಶೀಘ್ರದಲ್ಲೇ ಅವುಗಳನ್ನು ಉದ್ಘಾಟಿಸಲಾಗುವುದು ಎಂದು ಪಾಲಿಕೆ ಅಧಿಕಾರಿ ವರ್ಗ ತಿಳಿಸುತ್ತದೆ.

10 ವರ್ಷದ ಬೇಡಿಕೆ:

ಕಳೆದ 10 ವರ್ಷಗಳಿಂದಲೇ ಇಂತಹ ಬೇಡಿಕೆಯನ್ನು ಪೌರಕಾರ್ಮಿಕರು ಪಾಲಿಕೆಯ ಮುಂದೆ ಇಟ್ಟಿದ್ದರು. ಸಾಕಾರವಾಗಿರಲಿಲ್ಲ. ಇದಕ್ಕಾಗಿ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದುಂಟು. ಮನವಿ ಸಲ್ಲಿಸಿದ್ದು ಆಗಿತ್ತು. ಆದರೆ ಇದೀಗ ಬಹುವರ್ಷದ ಬೇಡಿಕೆಯನ್ನು ಮಹಾನಗರ ಪಾಲಿಕೆ ಈಡೇರಿಸಿದಂತಾಗಿದೆ. ಇದಕ್ಕೆ ಪೌರಕಾರ್ಮಿಕರು ಸಂತಸ ವ್ಯಕ್ತಪಡಿಸುತ್ತಾರೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಕಂಟೇನರ್‌ಗಳನ್ನು ಸಿದ್ಧಪಡಿಸಲಾಗಿದೆ. ಹೊರಗೆ ಎಷ್ಟೇ ಬಿಸಿಲಿದ್ದರೂ ವಾತಾವರಣವನ್ನು ತಂಪಾಗಿಡಿಸುತ್ತವೆ. ಪೌರಕಾರ್ಮಿಕರು ದಣಿದರೆ ನೆಮ್ಮದಿ ಪಡೆಯಬಹುದಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ತಿಳಿಸುತ್ತಾರೆ. ಒಟ್ಟಿನಲ್ಲಿ ಪೌರಕಾರ್ಮಿಕರ ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ.

ಈ ಕುರಿತು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, ಮಹಾನಗರ ಪಾಲಿಕೆಯಲ್ಲಿ ಇಂತಹ ವಿಶ್ರಾಂತಿ ತಂಗುದಾಣಗಳನ್ನಾಗಿ ನಿರ್ಮಿಸಿರುವುದು ಇದೇ ಮೊದಲು. ಇಲ್ಲಿ ವಿದ್ಯುತ್‌ ಸರಬರಾಜು, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ, ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಆಧುನಿಕ ತಂತ್ರಜ್ಞಾನ ಬಳಸಿ ಪೌರಕಾರ್ಮಿಕರಿಗಾಗಿ 25 ಭೀಮಾಶ್ರಯಗಳನ್ನು ನಿರ್ಮಿಸಲಾಗಿದೆ. ಕೆಲವೊಂದಿಷ್ಟು ಈಗಾಗಲೇ ಉದ್ಘಾಟಿಸಲಾಗಿದೆ. ಇನ್ನು ಕೆಲವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ಇವುಗಳಲ್ಲಿ ವಿಶ್ರಾಂತಿಗೆ ಬೇಕಾದ ಸಕಲ ಸೌಲಭ್ಯಗಳು ಇವೆ ಎಂದು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತ ವಿಜಯಕುಮಾರ ತಿಳಿಸುತ್ತಾರೆ.