ಸಾರಾಂಶ
ಕಡೂರು, ಅತ್ಯಾಧುನಿಕ ಮಾದರಿಯ ಬಸ್ ನಿಲ್ದಾಣವನ್ನು ಕಡೂರಿನಲ್ಲಿ ₹12. 50 ಕೋಟಿ ರು.ವೆಚ್ಚದಲ್ಲಿ ಹಾಗೂ ಬೀರೂರಿನಲ್ಲಿ 2.50 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಭೂಮಿಪೂಜೆ ನಡೆಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಪ್ರಕಟಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು.
ಅತ್ಯಾಧುನಿಕ ಮಾದರಿಯ ಬಸ್ ನಿಲ್ದಾಣವನ್ನು ಕಡೂರಿನಲ್ಲಿ ₹12. 50 ಕೋಟಿ ರು.ವೆಚ್ಚದಲ್ಲಿ ಹಾಗೂ ಬೀರೂರಿನಲ್ಲಿ 2.50 ಕೋಟಿ ರು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಶೀಘ್ರದಲ್ಲಿಯೇ ಭೂಮಿಪೂಜೆ ನಡೆಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಪ್ರಕಟಿಸಿದರು. ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿರ್ಮಿಸಲಾಗಿರುವ 70 ಲಕ್ಷ ರು. ವೆಚ್ಚದ ಹೊಸ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು. ಗ್ರಾಮದಲ್ಲಿ ಬಹಳ ವರ್ಷಗಳ ಕನಸು ನನಸಾಗಿದೆ. ಅರಳಗುಪ್ಪೆ ಚಂದ್ರೇಗೌಡರ ಸಿದ್ದಮ್ಮನವರ ಹೆಸರಿನಲ್ಲಿರುವ ಈ ಜಾಗದಿಂದ ಬಹಳಷ್ಟು ಅನುಕೂಲವಾಗಿದೆ.ಈ ಭಾಗಕ್ಕೆ ಅಗತ್ಯವಾಗಿದ್ದ ಬಸ್ ನಿಲ್ದಾಣಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಗಮನ ಸೆಳೆದು ಬಸ್ ನಿಲ್ದಾಣ ತರುವ ಮೂಲಕ ಇಂದು ಸಾಕಾರವಾಗಿದೆ. ಕಡೂರು- ಬೀರೂರಿನ ನೂತನ ಬಸ್ ನಿಲ್ದಾಣದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ಸಿಂಗಟಗೆರೆ ಹಾಗೂ ಅಂತರಗಟ್ಟೆಯಲ್ಲಿ ನೂತನ ಬಸ್ ನಿಲ್ದಾಣಕ್ಕೆ ಕ್ರಮ ಕೈಗೊಳ್ಳುವಂತೆ ಕೆಎಸ್ಆರ್ಟಿಸಿ ನಿಗಮದ ಜಿಲ್ಲಾ ನಿಯಂತ್ರಣ ಅಧಿಕಾರಿಗಳು ಪ್ರಸ್ತಾವನೆ ಕಳಿಸುವಂತೆ ಸೂಚಿಸಿದರು.ನನ್ನ ಶಾಸಕರ ನಿಧಿಯಿಂದ ಕ್ಷೇತ್ರದ ಕಡೂರು ಪಟ್ಟಣದ ಚೆಕ್ ಪೋಸ್ಟ್ ಬಳಿ, ಕನಕ ವೃತ್ತ, ಬೀರೂರು ಖಾಸಗಿ ಬಸ್ ನಿಲ್ದಾಣದ ಬಳಿ, ಪುರ ಗ್ರಾಮದಲ್ಲಿ, 9ನೇ ಮೈಲಿಕಲ್ಲಿನಲ್ಲಿ, ದಾಸರ ಹಳ್ಳಿ ಗುಡ್ಡದ ವೃತ್ತದ ಬಳಿ ಸೇರಿ 7 ಸಣ್ಣ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ಕೊಡಿಸಲಾಗಿದೆ ಎಂದರು. ಬಹಳಷ್ಟು ವರ್ಷಗಳ ಕಾಲ ಕೆಎಸ್ಆರ್ಟಿಸಿ ನಷ್ಟದಲ್ಲಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ನಮ್ಮ ಸರ್ಕಾರ ಉಚಿತ ಪ್ರಯಾಣ ಮಾಡಿದ ಮೇಲೆ ಲಾಭದಲ್ಲಿದೆ. ಬಿಜೆಪಿ ಸರ್ಕಾರದಲ್ಲಿ ಸಂಬಳ ಕೊಡಲು ಹಣ ಇರಲಿಲ್ಲ. 3500 ಬಸ್ಸುಗಳು ಗುಜರಿಗೆ ಹೋದರೂ ಕೊಂಡುಕೊಳ್ಳುವ ಪ್ರಯತ್ನ ಕೂಡ ಮಾಡಲಿಲ್ಲ ಎಂದು ದೂರಿದರು.ಈ ಒಂದು ವರ್ಷದ ಅವಧಿಯಲ್ಲಿ 1750 ಬಸ್ ಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ಖರೀದಿ ಮಾಡಿದ್ದು, 20 ಬಸ್ಸುಗಳು ಚಿಕ್ಕಮಗಳೂರು ವಿಭಾಗಕ್ಕೆ ಬಂದಿದೆ. ಅದರಲ್ಲಿ 4 ಅಶ್ವಮೇಧ ಬಸ್ಸುಗಳು ಇವೆ. ಇನ್ನು 20 ಬಸ್ ಗಳಿಗೆ ಬೇಡಿಕೆ ಇಟ್ಟಿದ್ದೇವೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದ ಮೇಲೆ ಇಂದು ಕಡೂರಿನಿಂದ ಎಮ್ಮೆ ದೊಡ್ಡಿ, ಕಡೂರಿನಿಂದ ಹಿರೇನಲ್ಲೂರು-ಚೌಳ ಹಿರಿಯೂರು, ಚಿತ್ರದುರ್ಗಕ್ಕೆ ಭಾಗಕ್ಕೆ ಬಸ್ ಚಾಲನೆ ನೀಡಲಾಗುತ್ತಿದೆ.ಕಡೂರು ಡಿಪೋದಲ್ಲಿ 84 ಶೆಡ್ಯೂಲ್ ಗಳಿದ್ದು ಅದರಲ್ಲಿ ತಾಲೂಕಿಗೆ ಆದ್ಯತೆ ನೀಡಿ. ಲಾಂಗ್ ರೂಟನ್ನು ಕಡಿಮೆ ಮಾಡಿ ವಿದ್ಯಾರ್ಥಿ ಗಳಿಗೆ ಅನುಕೂಲ ಮಾಡಿಕೊಡಿ ಎಂದರು. ಕಡೂರು ಡಿಪೋ 12,36 ಲಕ್ಷ ರು. ಲಾಭದಲ್ಲಿ ನಡೆಯುತ್ತಿದೆ ಆದಾಯವಿದ್ದು ಅಧಿಕಾರಿಗಳು, ಚಾಲಕರ ಶಿಸ್ತಿನ ಕರ್ತವ್ಯದಿಂದ ಲಾಭದತ್ತ ಸಾಗಿದೆ. ಸ್ವಚ್ಛತೆಗೆ ಗಮನ ಹರಿಸಬೇಕು. ಯಗಟಿಗೆ 2 ಕೋಟಿ ರು.ನ ರೈತ ಸಂಪರ್ಕ ಕೇಂದ್ರ, 6 ಕೋಟಿ ರು.ನ ಪ್ರಥಮ ದರ್ಜೆ ಕಾಲೇಜು ಆಗಿದ್ದು, ನ್ಯಾಕ್ ಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜೊತೆಯಲ್ಲಿ ಯಗಟಿ ಹೋಬಳಿಗೆ ತಾಲೂಕು ಕೇಂದ್ರದ ಸೌಲತ್ತುಗಳನ್ನು ತರುವುದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್, ನಿಗಮದ ಮುಖ್ಯ ಇಂಜಿನಿಯರ್ ಶಿವಕುಮಾರ್, ಇಇ ಅಮಲ್ದಾರ್, ಅಧಿಕಾರಿ ಜಾವಗಲ್ ಪ್ರಸನ್ನ, ಯಗಟಿ ಗ್ರಾಪಂ ಅಧ್ಯಕ್ಷೆ ಕಲಾವತಿ, ಅಣೇಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ, ಸದಸ್ಯ ಗೋವಿಂದಪ್ಪ, ಮಂಜುನಾಥ್ ರವಿಕುಮಾರ್, ಜ್ಯೋತಿ, ಸಾಕಮ್ಮ, ಭಾರತಿ ಬಸವರಾಜ್, ಪೋಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್ಐ ರಂಗನಾಥ್ ಮತ್ತು ಗ್ರಾಮಸ್ಥರು ಹಾಜರಿದ್ದರು.