ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನಮ್ಮ ಸಂಸ್ಕೃತಿ, ಪರಂಪರೆ, ಸಿದ್ಧಾಂತ, ಆಚಾರ-ವಿಚಾರಗಳು ಹಾಗೂ ಕೃಷಿ, ಧಾರ್ಮಿಕ ಪೂಜಾ ವಿಧಿ-ವಿಧಾನ, ಸಾಧುಗಳ ಸೇವೆ ಮಾಡುವುದರೊಂದಿಗೆ ಎಲ್ಲಾ ರೀತಿಯ ಭಾರತೀಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪಾರಂಪರಿಕ ಗುರುಕುಲವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶ್ರವಣಬೆಳಗೊಳ ಶ್ರೀ ದಿಂಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಶ್ರವಣಬೆಳಗೊಳ ಸಮೀಪದ ಶ್ರೀಧವಲತೀರ್ಥಂನಲ್ಲಿರುವ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಗುರುಕುಲ ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಂದಾಜು ೪.೫ ಕೋಟಿ ರು. ವೆಚ್ಚದಲ್ಲಿ ೨೬೦೦೦ ಚ. ಅಡಿಯ ೧೫ ಕೊಠಡಿಗಳ ಪುರಾತನ ಶೈಲಿಯ ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡುತ್ತಿರುವ ಪಾರಂಪರಿಕ ಕಟ್ಟಡವಾಗಿದೆ ಎಂದರು.ಹಿಂದಿನಿಂದಲೂ ಶ್ರವಣಬೆಳಗೊಳ ಶ್ರೀಮಠದ ಪೀಠದಲ್ಲಿದ್ದ ಎಲ್ಲ ಸ್ವಾಮೀಜಿಯವರು ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಕೊಡುವುದರ ಜತೆಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಹಾಗೂ ಮಹಿಳಾ ಶಿಕ್ಷಣಕ್ಕೂ ಹೆಚ್ಚು ಪ್ರಾಶಸ್ತ್ಯವನ್ನು ನೀಡಿದ್ದರು. ಶ್ರವಣಬೆಳಗೊಳದಲ್ಲಿ ಸಾವಿರಾರು ವರ್ಷಗಳಿಂದ ಗುರುಕುಲಗಳು ನಡೆದುಕೊಂಡು ಬರುತ್ತಿವೆ. ಸುಮಾರು ೧೫೦ ವರ್ಷಗಳ ಹಿಂದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಅವರೆಲ್ಲರೂ ಮದ್ರಾಸ್ ಪ್ರಾಂತ್ಯದವರಾಗಿದ್ದರು ಎನ್ನುವ ದಾಖಲೆಗಳು ಸಿಗುತ್ತವೆ. ೧೯೨೮ರಲ್ಲಿ ಇಲ್ಲಿನ ಗುರುಗಳಾಗಿದ್ದ ನೇಮಿಸಾಗರವರ್ಣಿ ಚಾರುಕೀರ್ತಿ ಸ್ವಾಮಿಗಳು ಜೈನ ಸಂಸ್ಕೃತ ವೇದ ಮಹಾ ಪಾಠಶಾಲೆ ಎಂಬ ಬೃಹತ್ ಗುರುಕುಲವನ್ನು ತೆರೆದಿದ್ದರು. ಅಲ್ಲದೇ ದೇಶಾದ್ಯಂತ ಅನೇಕ ಗುರುಕುಲಗಳನ್ನು ತೆರೆದು ವಿದ್ಯಾಭ್ಯಾಸಕ್ಕೆ, ಮಹಿಳೆಯರ ಶಿಕ್ಷಣಕ್ಕೆ ಮಹತ್ವ ನೀಡಿದ್ದರು.ನಮ್ಮ ಹಿಂದಿನ ಗುರುಗಳಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರು ಗೊಮ್ಮಟೇಶ್ವರ ವಿದ್ಯಾಪೀಠ ಬ್ರಹ್ಮಚರ್ಯ ಆಶ್ರಮ ಎಂಬ ಗುರುಕುಲವನ್ನು ತೆರೆದು, ತಾವು ಪೀಠಾಧ್ಯಕ್ಷರಾಗಿದ್ದ ೫೪ ವರ್ಷಗಳ ಅವಧಿಯಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದರು. ಈ ಗುರುಕುಲದಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಅನೇಕರು ಸಾಧು ಸಂತರಾಗಿದ್ದು, ಪ್ರಸ್ತುತ ಕರ್ನಾಟಕದಲ್ಲಿರುವ ಹಲವಾರು ಜೈನ ಮಠಗಳಿಗೆ ಪೀಠಾಧಿಪತಿಗಳಾಗಿದ್ದಾರೆ.
ಇಂತಹ ಇತಿಹಾಸ ಹೊಂದಿರುವ ಈ ಗುರುಕುಲದಲ್ಲಿ ಪ್ರಸ್ತುತ ಒಟ್ಟು ೨೦೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ೨೦೨೪ರಿಂದ ಶ್ರೀ ಕಾಳಲಾದೇವಿ ಕನ್ಯಾಶ್ರಮ ಗುರುಕುಲವನ್ನು ಮತ್ತೆ ಪುನರಾರಂಭಿಸಿ ೩೫ ವಿದ್ಯಾರ್ಥಿನಿಯರಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಬಟ್ಟೆ, ಸಮವಸ್ತ್ರ, ಪುಸ್ತಕ, ಊಟ-ಉಪಹಾರ ಸೇರಿದಂತೆ ಅವರ ಶಿಕ್ಷಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಉಚಿತವಾಗಿ ವ್ಯವಸ್ಥೆ ಮಾಡುವ ಮೂಲಕ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜತೆಗೆ ಸಿಬಿಎಸ್ಸಿ ಮಾದರಿಯ ಶಿಕ್ಷಣವನ್ನು ಉಚಿತವಾಗಿ ನೀಡಬೇಕು ಎಂಬ ಉದ್ದೇಶದಿಂದ ಮುಂದಿನ ೨೦೩೦ರ ಮಹಾಮಸ್ತಕಾಭಿಷೇಕ ಮಹೋತ್ಸವದ ಒಳಗೆ ೧೦೦೮ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್, ಕೃತಿ ಜೈನ್ ಹಾಗೂ ಕಿಯಾಂಶ್ ಜೈನ್ ಅವರಿಗೆ ಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಶ್ರೀ ಮಠದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್ ಕುಮಾರ್, ಸದಸ್ಯರಾದ ಭರತೇಶ್, ಯಶಸ್, ಪೌದನ್ ಮುಂತಾದವರಿದ್ದರು. ಜಿನೇಶ್ ಶಾಸ್ತ್ರಿ ಹಾಗೂ ವಿಮಲ್ ಪಂಡಿತ್ ಪೂಜಾ ವಿಧಿವಿಧಾನ ನೆರವೇರಿಸಿದರು.