ಮನೆಗಳಲ್ಲೇ ಗ್ರಂಥಾಲಯ ಸ್ಥಾಪಿಸಿದ ಉಡುಪಿ ಕಸಾಪ!

| Published : Nov 19 2025, 01:00 AM IST

ಸಾರಾಂಶ

ಉಡುಪಿ ಕನ್ನಡ ಸಾಹಿತ್ಯ ಪರಿಷತ್ತು ‘ಮನೆಯೇ ಗ್ರಂಥಾಲಯ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ.

ಸುಭಾಶ್ಚಂದ್ರ ಎಸ್‌. ವಾಗ್ಳೆಕನ್ನಡಪ್ರಭ ವಾರ್ತೆ ಉಡುಪಿಉಡುಪಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಒಂದು ಮೌನ ಕ್ರಾಂತಿಯನ್ನು ಮಾಡಿದೆ. ‘ಮನೆಯೇ ಗ್ರಂಥಾಲಯ’ ಎಂಬ ಅಭಿಯಾನವನ್ನು ಹಮ್ಮಿಕೊಂಡು 100 ದಿನಗಳಲ್ಲಿ 100 ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಅದೀಗ 200ರ ಗಡಿಯತ್ತ ದಾಪುಗಾಲು ಹಾಕುತ್ತಿದೆ.ಆ ಅಭಿಯಾನ ಇಂದು ಇಡೀ ರಾಜ್ಯದ ಗಮನ ಸೆಳೆದಿದೆ ಮತ್ತು ರಾಜ್ಯ ಸರ್ಕಾರದ ಪುಸ್ತಕ ಪ್ರಾಧಿಕಾರ ಮತ್ತು ತುಳು ಸಾಹಿತ್ಯ ಅಕಾಡೆಮಿಗಳು ಕೂಡ ಈ ಅಭಿಯಾನವನ್ನು ಕೈಗೆತ್ತಿಕೊಂಡಿವೆ.ಉಡುಪಿಯಂತಹ ಶಿಕ್ಷಣದಲ್ಲಿ ಮುಂದಿರುವ ಜಿಲ್ಲೆಯಲ್ಲಿ ಪ್ರತಿಯೊಂದು ಮಗುವೂ ಉತ್ತಮ ಶಿಕ್ಷಣವನ್ನೇನೋ ಪಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಉಡುಪಿಯಲ್ಲಿ ಸಾಹಿತ್ಯದ ಓದುಗರಿಗೇನೂ ಕೊರತೆ ಇರಲಿಲ್ಲ. ಆದರೆ, ಜಿಲ್ಲೆಯಲ್ಲಿ ವಿಪರೀತ ಹೆಚ್ಚಿರುವ ಅಧುನಿಕ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣದಿಂದಾಗಿ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಗಣನೀಯವಾಗಿ ಕಡಿಮೆಯಾಗಿದೆ. ಕನ್ನಡ ಸಾಹಿತ್ಯದ ಓದುಗರು ಕಡಿಮೆಯಾಗುತ್ತಿದ್ದಾರೆ, ಇದಕ್ಕೆ ಈ ಮಕ್ಕಳ ಕೈಗೆ ಸುಲಭವಾಗಿ ಕನ್ನಡ ಸಾಹಿತ್ಯದ ಕೃತಿಗಳು (ಮುಖ್ಯವಾಗಿ ಶಾಲೆಗಳಲ್ಲಿ) ಸಿಗದಿರುವುದು ಕೂಡ ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೂ ಕನ್ನಡ ಸಾಹಿತ್ಯದ ಕೃತಿಗಳನ್ನು ತಲುಪಿಸುವುದಕ್ಕಾಗಿ ಉಡುಪಿ ತಾಲೂಕು ಕಸಾಪ ಅಧ್ಯಕ್ಷ, ಸಂಘಟಕ ರವಿರಾಜ್ ಎಚ್.ಪಿ.ಮತ್ತವರ ತಂಡ ಯೋಚಿಸಿ ಯೋಜಿಸಿದ್ದೇ ಈ ಮನೆಯೇ ಗ್ರಂಥಾಲಯ ಯೋಜನೆ.168ಕ್ಕೂ ಹೆಚ್ಚು ಮನೆಗಳಲ್ಲಿ ಗ್ರಂಥಾಲಯ:

2024ರ ಮೇ 21ರಂದು ನಗರದ ರಂಗನಟ ವಿವೇಕಾನಂದ ಅವರ ಮನೆಯಲ್ಲಿ ನಾಡೋಜ ಕೆ.ಪಿ.ರಾವ್ ಅವರು ಗ್ರಂಥಾಲಯವನ್ನು ಉದ್ಘಾಟಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ 100 ದಿನಗಳಲ್ಲಿ 100 ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಯೋಜನೆ ಇತ್ತಾದರೂ, ಅದಿನ್ನೂ ಮುಂದುವರಿದಿದೆ, 168ಕ್ಕೂ ಹೆಚ್ಚು ಮನೆಗಳನ್ನು ತಲುಪಿದೆ.ಈ ಮನೆಯೇ ಗ್ರಂಥಾಲಯಕ್ಕೆ ದಾನಿಗಳು ಕಾದಂಬರಿ, ಧಾರ್ಮಿಕ, ಪೌರಾಣಿಕ, ಆರೋಗ್ಯ, ವ್ಯಕ್ತಿತ್ವ ವಿಕಸನ, ಕತೆ-ಕವನ ಸಂಗ್ರಹ, ನಾಟಕ, ಕನ್ನಡ ಸಾಹಿತ್ಯ... ಇತ್ಯಾದಿ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾರೆ. ಈವರೆಗೆ ಸುಮಾರು 3,200ಕ್ಕೂ ಹೆಚ್ಚು ಪುಸ್ತಕಗಳನ್ನು ಈ ಅಭಿಯಾನದಡಿ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಗಳ ಮನೆ, ಅನೇಕ ಸರ್ಕಾರಿ ಅಧಿಕಾರಿಗಳು, ಸಮಾಜದ ಗಣ್ಯರ ಮನೆಯಲ್ಲಿ, ಅನೇಕ ಸಂಘ-ಸಂಸ್ಥೆಗಳ ಕಚೇರಿಗಳಲ್ಲಿ, ಇದೀಗ ಸಾಮಾನ್ಯರ ಮನೆಗಳಲ್ಲಿಯೂ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಮನೆ ಮಾತ್ರವಲ್ಲದೇ ಅಂಗಡಿ, ಹೋಟೆಲ್‌, ಆಸ್ಪತ್ರೆ ಸೇರಿ ಒಂದು ಬಸ್‌ ನಿಲ್ದಾಣದಲ್ಲಿಯೂ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

ದೇಶದ ಗಡಿ ದಾಟಿದ ಅಭಿಯಾನ:

ಈ ಅಭಿಯಾನ ಈಗ ದೇಶದ ಗಡಿಯನ್ನೂ ದಾಟಿದೆ. ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ನೆಲೆಸಿರುವ ಉಡುಪಿಗರ ಮನೆಯಲ್ಲಿಯೂ ಗ್ರಂಥಾಲಯಗಳನ್ನು ತೆರೆಯಲಾಗಿದ್ದು, ಅವರಿಗೂ ಉಚಿತವಾಗಿ ಕನ್ನಡ ಪುಸ್ತಕಗಳನ್ನು ನೀಡಲಾಗಿದೆ. ಇದೀಗ ರಾಜ್ಯ ಪುಸ್ತಕ ಪ್ರಾಧಿಕಾರ ಕೂಡ ಮನೆಗೊಂದು ಗ್ರಂಥಾಲಯ ಯೋಜನೆಯನ್ನು ಘೋಷಿಸಿದೆ. ತುಳು ಸಾಹಿತ್ಯ ಅಕಾಡೆಮಿ ಕೂಡ ಮನೆಯಲ್ಲಿ ಗ್ರಂಥಾಲಯ ಮಾಡುವವರಿಗೆ ಪುಸ್ತಕಗಳನ್ನು ನೀಡುತ್ತಿದೆ ಎನ್ನುತ್ತಾರೆ ಈ ಯೋಜನೆಯ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು.ಈ ಮೂಲಕ ಉಡುಪಿ ಕಸಾಪ, ಉಡುಪಿಯ ನೂರಾರು ಮನೆಗಳಲ್ಲಿ ಮಕ್ಕಳ ಕೈಗೆ ಕನ್ನಡ ಸಾಹಿತ್ಯದ ಕೃತಿಗಳು ಸಿಗುವಂತೆ, ಅವುಗಳನ್ನು ಓದುವುದಕ್ಕೆ ಪ್ರೇರಣೆಯಾಗುವಂತೆ ಮಾಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದೆ.ಇಷ್ಟು ಮಾತ್ರವಲ್ಲದೆ, ಉಡುಪಿ ತಾಲೂಕು ಕಸಾಪ, ಮಣಿಪಾಲ ಬಾನುಲಿ ಕೇಂದ್ರದ ಮೂಲಕ ಸ್ವತಃ ಕತೆಗಾರರ ಮೂಲಕ ಅವರೇ ಬರೆದ ಕತೆಗಳನ್ನು ಓದುವ ‘ಕತೆ ಕೇಳೋಣ’ ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ. ಕನ್ನಡ ಮಾತನಾಡೋಣ ಎಂಬ ಯೋಜನೆಯಡಿ ಹೊರರಾಜ್ಯದಿಂದ 30ಕ್ಕೂ ಹೆಚ್ಚು ಸರ್ಕಾರಿ, ಬ್ಯಾಂಕ್ ಉದ್ಯೋಗಿಗಳಿಗೆ ಕನ್ನಡವನ್ನು ಕಲಿಸಿದೆ.

ಕೋಟ್‌:ಮನೆ, ಮನೆಗಳಲ್ಲಿ ಕನ್ನಡ ಪುಸ್ತಕಗಳು ಇರಬೇಕು. ಮನೆಯ ಮಕ್ಕಳು ಕನ್ನಡ ಪುಸ್ತಕಗಳನ್ನು ಓದುವಂತಾಗಬೇಕು. ಮನೆಗೆ ಬಂದ ಅತಿಥಿಗಳು ಪುಸ್ತಕಗಳನ್ನು ಓದಬೇಕು. ಪ್ರತಿ ಮನೆಯಲ್ಲಿಯೂ ಗ್ರಂಥಾಲಯ ಇರಬೇಕು ಎನ್ನುವ ಮಹತ್ವಾಕಾಂಕ್ಷೆಯ ಅಭಿಯಾನವೇ ಈ ಮನೆಯೇ ಗ್ರಂಥಾಲಯ. ಇನ್ನಷ್ಟು ಗ್ರಂಥಾಲಯಗಳು ಮನೆ, ಮನೆಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಆಸ್ಪತ್ರೆಗಳಲ್ಲಿ ಮಾಡಬೇಕೆನ್ನುವ ಆಸೆ ನಮ್ಮದು.- ರವಿರಾಜ್ ಎಚ್.ಪಿ. ಅಧ್ಯಕ್ಷ , ಉಡುಪಿ ಕಸಾಪ