ವಿಶೇಷ ಅನುದಾನ ತಂದು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ: ಶಾಸಕ ಕೆ.ಎಂ.ಉದಯ್

| Published : Apr 12 2025, 12:49 AM IST

ಸಾರಾಂಶ

ನೀರಾವರಿ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಂದ ಕಾಲುವೆಗಳಲ್ಲಿ ನೀರಿನ ಹರಿವು ಸುಧಾರಣೆಗೊಳ್ಳಲಿದೆ. ರೈತರಿಗೆ ನೀರು ಸಮರ್ಪಕವಾಗಿ ತಲುಪುತ್ತದೆ. ಸೂಳೆಕೆರೆ ಅಭಿವೃದ್ಧಿ ಹಾಗೂ ಜಲಾನಯನ ಪ್ರದೇಶಗಳ ಕಾಲುವೆಗಳ ಅಭಿವೃದ್ಧಿಗೆ ಸುಮಾರು 78 ಕೋಟಿ ವೆಚ್ಚದ ಕಾಮಗಾರಿ ಈಗಾಗಲೇ ಟೆಂಡರ್ ಆಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸರ್ಕಾರದಿಂದ ಮದ್ದೂರು ಕ್ಷೇತ್ರಕ್ಕೆ ವಿಶೇಷ ಅನುದಾನ ತಂದು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗುತ್ತಿದೆ. ಮುಂದಿನ 2 ತಿಂಗಳವರೆಗೂ ಗುದ್ದಲಿ ಪೂಜೆಗಳು ಮುಂದುವರಿಯಲಿವೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಲಕ್ಷ್ಮೇಗೌಡನದೊಡ್ಡಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ಸುಮಾರು 5 ಕೋಟಿ ರು. ವೆಚ್ಚದಲ್ಲಿ ಲೋಕಸರ ನಾಲಾ ವ್ಯಾಪ್ತಿಯಲ್ಲಿ ಬರುವ ಯಡಗನಹಳ್ಳಿ ಹಾಗೂ ಲಕ್ಷ್ಮೇಗೌಡನದೊಡ್ಡಿ ಗ್ರಾಮಗಳ ಅಚ್ಚುಕಟ್ಟು ಪ್ರದೇಶದಲ್ಲಿ ನಾಲಾ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಮಾತಾನಾಡಿದರು.

ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳನ್ನು ವಿಶೇಷ ಅನುದಾನದ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ರೈತರ ಕಲ್ಯಾಣಕ್ಕಾಗಿ ಸರಕಾರದಿಂದ ಹೆಚ್ಚಿನ ಅನುದಾನ ತಂದು ನೀರಾವರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ನೀರಾವರಿ ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳಿಂದ ಕಾಲುವೆಗಳಲ್ಲಿ ನೀರಿನ ಹರಿವು ಸುಧಾರಣೆಗೊಳ್ಳಲಿದೆ. ರೈತರಿಗೆ ನೀರು ಸಮರ್ಪಕವಾಗಿ ತಲುಪುತ್ತದೆ. ಸೂಳೆಕೆರೆ ಅಭಿವೃದ್ಧಿ ಹಾಗೂ ಜಲಾನಯನ ಪ್ರದೇಶಗಳ ಕಾಲುವೆಗಳ ಅಭಿವೃದ್ಧಿಗೆ ಸುಮಾರು 78 ಕೋಟಿ ವೆಚ್ಚದ ಕಾಮಗಾರಿ ಈಗಾಗಲೇ ಟೆಂಡರ್ ಆಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ತಾಲೂಕಿನಲ್ಲಿ 1 ಸಾವಿರ ಟಿ.ಸಿ(ಟ್ರಾನ್ಸ್‌ಫಾರ್ಮರ್) ಗಳನ್ನು ಮಂಜೂರು ಮಾಡಿಸಿ ತಾಲೂಕಿನಾದ್ಯಾಂತ ಅಳವಡಿಸಿದ್ದು, ರೈತರ ನೆರವಿಗೆ ನಿಂತಿದ್ದೇನೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಮದ್ದೂರು ಕ್ಷೇತ್ರ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ. ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಬೇಕು. ಅಭ್ಯರ್ಥಿಗಳನ್ನು ಗೆಲ್ಲಿಸಿ ಶಾಸಕ ಉದಯ್ ಅವರ ಕೈಬಲಪಡಿಸಬೇಕು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾಪಂ ಮಾಜಿ ಅಧ್ಯಕ್ಷರಾದ ದೇವಿರಮ್ಮ, ಚನ್ನೇಗೌಡ, ಮುಖಂಡರಾದ ಯಡಗನಹಳ್ಳಿ ಕೇಂಚೇಗವಡ, ಪುಟ್ಟೇಗೌಡ, ಮಂಚೇಗೌಡ, ಮಾದರಹಳ್ಳಿ ಚನ್ನಶೇಖರ್, ಮರಿಗೌಡ, ಸದಾನಂದ, ನಂದೀಶ್ ಸೇರಿದಂತೆ ಮತ್ತಿತರಿದ್ದರು.