ನಾಳೆ ಅಯೋಧ್ಯೆಯಲ್ಲಿ ಕನ್ಯಾಡಿ ರಾಮಕ್ಷೇತ್ರದ ಶಾಖಾ ಮಠದ ಭೂಮಿಪೂಜೆ

| Published : May 18 2025, 01:53 AM IST

ನಾಳೆ ಅಯೋಧ್ಯೆಯಲ್ಲಿ ಕನ್ಯಾಡಿ ರಾಮಕ್ಷೇತ್ರದ ಶಾಖಾ ಮಠದ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

೧೦೦೮ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಶ್ರಮ ಬಹಳಷ್ಟಿದೆ.

ಭಟ್ಕಳ; ಉಜಿರೆಯ ಕನ್ಯಾಡಿಯ ರಾಮಕ್ಷೇತ್ರದ ಶಾಖಾ ಮಠದ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಮೇ ೧೯ರಂದು ನಡೆಯಲಿರುವ ಭೂಮಿ ಪೂಜೆಗೆ ಶ್ರೀಗಳ ಶಿಷ್ಯಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದೇವೆ ಎಂದು ಸಾರದಹೊಳೆಯ ನಾಮಧಾರಿ ಸಮಾಜ ಮತ್ತು ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಹೇಳಿದರು.ಅವರು ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಅಯೋಧ್ಯೆಯಲ್ಲಿ ನಮ್ಮ ಗುರುಗಳ ಶಾಖಾ ಮಠವೊಂದು ಆರಂಭವಾಗುತ್ತಿದ್ದು, ಇದಕ್ಕೆ ನಮ್ಮ ಕುಲಗುರುಗಳಾದ ೧೦೦೮ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಶ್ರಮ ಬಹಳಷ್ಟಿದೆ. ಅಯೋಧ್ಯೆಯಲ್ಲಿ ನಮ್ಮ ಶಾಖಾ ಮಠವನ್ನು ಸ್ಥಾಪಿಸಬೇಕು ಎನ್ನುವ ಇಚ್ಚೆಯಿಂದ ಜಾಗಾ ಖರೀಧಿಸಿ ಅಗತ್ಯದ ಎಲ್ಲ ಕೆಲಸಗಳನ್ನು ಪೂರೈಸಿದ್ದು ವಿವಿಧ ವೈದಿಕ ಕಾರ್ಯಕ್ರಮಗಳ ನಂತರ ಶಿಲಾನ್ಯಾಸ ಕಾರ್ಯಕ್ರಮ ನಡೆಸಲಿದ್ದಾರೆ.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅನೇಕ ಗುರುಗಳು, ಗಣ್ಯ ವ್ಯಕ್ತಿಗಳು ಸೇರಿದಂತೆ ರಾಜ್ಯದ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಚಿವ ಮಂಕಾಳ ವೈದ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ಭಾಗವಹಿಸಲಿದ್ದಾರೆ ಎಂದ ಅವರು, ಭಟ್ಕಳ ಸೇರಿದಂತೆ ಜಿಲ್ಲೆಯಿಂದ ನೂರಾರು ಜನರು ಭಾಗವಹಿಸುವ ನಿರೀಕ್ಷೆ ಇದ್ದು ಸಾರದಹೊಳೆ ಕೂಟದಿಂದ ಸುಮಾರು ೪೦ ಜನರು ಭಾಗವಹಿಸಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಕಾಯ್ಕಿಣಿ, ಪ್ರಧಾನ ಕಾರ್ಯದರ್ಶಿ ವಾಸುದೇವ ನಾಯ್ಕ, ಪ್ರಮುಖರಾದ ಕೃಷ್ಣಾ ನಾಯ್ಕ, ರಾಜು ನಾಯ್ಕ, ಆನಂದ ನಾಯ್ಕ, ಮಹಾಬಲೇಶ್ವರ ನಾಯ್ಕ, ಮಾದೇವ ನಾಯ್ಕ ವಿ.ಜೆ. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಸಾರದಹೊಳೆ ಹಳೇಕೋಟೆ ದೇವಸ್ಥಾನದ ಅಧ್ಯಕ್ಷ ಆರ್.ಕೆ.ನಾಯ್ಕ ಮಾತನಾಡುತ್ತಿರುವುದು.