ಸಾರಾಂಶ
- ಬೆಳಗಿನ ಜಾವ ಹೊಲಗದ್ದೆಗಳಲ್ಲಿ ಝೇಂಕರಿಸಿದ ಶಂಖ,ಜಾಗಟೆ ನಾದ,ಭೂಮಿತಾಯಿಗೆ ವಿಶೇಷ ಪೂಜೆ.
ಶೃಂಗೇರಿ: ತಾಲೂಕಿನೆಲ್ಲೆಡೆ ಮಂಗಳವಾರ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಜಮೀನು, ಹೊಲಗದ್ದೆಗಳಲ್ಲಿ ರೈತರು ಪೂಜಾ ಸಾಮಗ್ರಿಗಳನ್ನಿಟ್ಟು ಶಂಖ, ಜಾಗಟೆ ಭಾರಿಸಿ ಭೂಮಿ ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು. ಗ್ರಾಮೀಣ ಪ್ರದೇಶದೆಲ್ಲೆಡೆ ಹಬ್ಬದ ಕಹಳೆ ಮೊಳಗಿತು.ಭೂಮಿ ಹುಣ್ಣಿಮೆ ಹಿಂದಿನ ದಿನ ಮಹಿಳೆಯರು ಮನೆಗಳನ್ನು ಶುಭ್ರಗೊಳಿಸಿ, ಪೂಜೆಗೆ ಅಡುಗೆ ವಸ್ತುಗಳನ್ನು ಸಿದ್ದಪಡಿಸಲು ತಯಾರಿ ನಡೆಸುತ್ತಿದ್ದರೆ, ಪುರುಷರು ಹೊಲ ಗೆದ್ದೆಗಳಿಗೆ ಹೋಗಿ ಅಲ್ಲಿ ಹೊಡೆತುಂಬಿ ನಿಂತಿರುವ ಪೈರಿನ ಹತ್ತಿರ ಬಾಳೆಕಂಬಗಳನ್ನು ನೆಟ್ಟು, ಕಬ್ಬು, ಮಾವಿನ ತೋರಣ ಕಟ್ಟಿ ಸಿಂಗರಿಸುತ್ತಾರೆ.
ಭೂಮಿಹುಣ್ಣಿಮೆ ಪೂಜೆಗಾಗಿ ಎಲ್ಲಾ ಜಾತಿಯ ಸೊಪ್ಪು ತರಕಾರಿಗಳಿಂದ ಪಲ್ಯ ತಯಾರಿಸಿ,ಕೋಸಂಬರಿ,ಅಂಬಲಿ,ಅನ್ನ ತಯಾರಿಸಿ ಅಡುಗೆಗಳನ್ನೆಲ್ಲ ಒಂದು ಗೆರಸಿಗೆ ಸುರುವಿ,ಎಲ್ಲಾ ಅನ್ನ ಕಲಸಿ ಬುಟ್ಟಿಗಳಲ್ಲಿ ತುಂಬಿ ಇಡಲಾಗಿತ್ತು.ಅಡಕೆ ಹಿಂಗಾರದ ಹೂ,ಮಾವಿನ ಎಲೆ ಇಟ್ಟು ಕಳಶ ಮಾಡಿ ಇದಕ್ಕೆ ಮನೆಯಲ್ಲಿರುವ ಬಂಗಾರದ ಸರ,ಬಳೆ ಎಲ್ಲಾ ಹಾಕಿ ಶೃಂಗಾರ ಮಾಡಿ ಮೂರ್ನಾಲ್ಕು ಜನ ಸೇರಿ ಕಳಶವಿದ್ದ ಮಣೆ,ಕಲಸಿದ ಅನ್ನದ ಪಾತ್ರೆ,ಬುಟ್ಟಿಯನ್ನು ಹೊತ್ತು ಸೂರ್ಯೋದಯಕ್ಕೂ ಮೊದಲು ಬೆಳಕಿನ ದೊಂದಿಯೊಂದಿಗೆ ಹೊಲಗೆದ್ದೆಗಳಿಗೆ ತೆರಳಿದರು.ಅಲ್ಲಿ ಪೂಜಾ ವಸ್ತುಗಳನ್ನು ಪೂಜಾ ಸ್ಥಳದಲ್ಲಿಟ್ಟು ಹೊಡೆ ಬಂದ ಬತ್ತದ ಎರಡು ಮೂರು ನೆಟ್ಟಿಯ ಬುಡಕ್ಕೂ, ಕಳಶಕ್ಕೂ ಮಣ್ಣಿನ ಮುದ್ದೆಗಳಿಗೂ ಕುಂಕುಮ, ಗಂಧ, ಚಂದನ, ಹಚ್ಚೆ ಹೂಮುಡಿಸಿ, ಬಳೆ, ಬಿಚ್ಚೋಲೆಗಳನ್ನು ಅರ್ಪಿಸಿ ಶಂಖ, ಜಾಗಟೆ ಭಾರಿಸಿ ದೂಪಾರತಿ ಮಾಡಲಾಯಿತು. ಕಲಸನ್ನದ ಖಾದ್ಯ, ಬಾಳೆಹಣ್ಣು, ತೆಂಗಿನ ಕಾಯಿ ಒಡೆದು ಪೈರಿಗೆ ನೈವೇದ್ಯ ಮಾಡಲಾಯಿತು. ನಂತರ ಹಿಡಿ ಅನ್ನವನ್ನು ಗದ್ದೆಗೆ ಬೀಸಿ ಒಗೆಯಲಾಯಿತು. ಗ್ರಾಮೀಣ ಪ್ರದೇಶದೆಲ್ಲೆಡೆ ಸೂರ್ಯೋದಯಕ್ಕೂ ಮೊದಲು ಒಂದೆರೆಡು ಗಂಟೆಗಳ ಕಾಲ ಹೊಲಗೆದ್ದೆಗಳಲ್ಲಿ ಬೆಂಕಿಯ ದೊಂದಿಗಳು ಕಂಡುಬಂದವು. ಶಂಖ,ಜಾಗಟೆಗಳ ಶಬ್ಬಗಳು ಝೇಂಕರಿಸಿ ಕಿವಿಗಪ್ಪಳಿಸುತ್ತಿತ್ತು.
7 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನಲ್ಲಿ ಭೂಮಿಹುಣ್ಣಿಮೆ ಹಬ್ಬದ ಅಂಗವಾಗಿ ಭೂಮಿ ಪೂಜೆ ನಡೆಯಿತು.