ಸಾರಾಂಶ
ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಕಮಿಷನ್ ವಸೂಲಿ ಆರೋಪಕ್ಕೆ ಗುರಿಯಾಗಿರುವ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
- ರಾಜೀನಾಮೆ ನೀಡುವಂತೆ ಸಿಎಂ ತಾಕೀತು
- ಎಐ ಬಳಸಿ ತಿರುಚಿದ್ದಾರೆ ವಾದ ಒಪ್ಪದ ಸಿದ್ದು
===ಕನ್ನಡಪ್ರಭ ವಾರ್ತೆ ಬೆಂಗಳೂರುಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಕಮಿಷನ್ ವಸೂಲಿ ಆರೋಪಕ್ಕೆ ಗುರಿಯಾಗಿರುವ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 15 ಕೋಟಿ ರು.ಗಳ ವೆಚ್ಚದಲ್ಲಿ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಯೋಜನೆಯಡಿ 60 ಎಕರೆಯನ್ನು ಖರೀದಿಸಿ, ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿತ್ತು. ಈ ಯೋಜನೆಯಲ್ಲಿ ಫಲಾನುಭವಿಗಳಿಂದ ಪ್ರತಿ ಘಟಕ ವೆಚ್ಚಕ್ಕೂ ಶೇ. 40 ರಿಂದ ಶೇ.60 ರಷ್ಟು ಕಮಿಷನ್ ನಿಗದಿ ಮಾಡಿರುವ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಎಐ ಬಳಸಿ ವಿಡಿಯೋ- ಒಪ್ಪದ ಸಿಎಂ:
ಈ ವೇಳೆ ರವಿಕುಮಾರ್ ಅವರು ಅದು ಎಐ ಬಳಕೆ ಮಾಡಿ ವಿಡಿಯೋ ತಿರುಚಲಾಗಿದೆ. ಹೀಗಾಗಿ ತನಿಖೆಗೆ ವಹಿಸಿ. ತನಿಖೆಯಲ್ಲಿ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡರು.ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು, ಮೊದಲು ರಾಜೀನಾಮೆ ಕೊಡಪ್ಪ. ಅವೆಲ್ಲಾ ಆಮೇಲೆ ಗೊತ್ತಾಗುತ್ತದೆ. ಕೂಡಲೇ ರಾಜೀನಾಮೆ ಕೊಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.