ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭೋವಿ ಜನಾಂಗ ಹಾಗೂ ವಡ್ಡರ ಜನಾಂಗಕ್ಕೂ ಯಾವುದೇ ಸಂಬಂಧ ಇಲ್ಲ. ವಡ್ಡರ ಜನಾಂಗದವರಿಗೆ ಭೋವಿ ಎಂದು ಪ್ರಮಾಣಪತ್ರ ನೀಡಿದಲ್ಲಿ ನ್ಯಾಯಾಲಯ ಮೂಲಕ ಉತ್ತರ ನೀಡಲಾಗುವುದು ಎಂದು ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ರಾಜ್ಯಾಧ್ಯಕ್ಷ ಕೇಶವ ಭೋವಿ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯ ರಾಜಮಹಾರಾಜರ ಕಾಲದಿಂದಲೂ ಪಲ್ಲಕ್ಕಿ, ಮೇಣೆ ಹೊರುವ ವೃತ್ತಿಯಲ್ಲಿ ಬಂದವರಾಗಿದ್ದು, ನಾವು ನಿಜವಾದ ಭೋವಿ ಸಮಾಜದವರಾಗಿದ್ದು, ವಡ್ಡರ ಸಮಾಜ ನಮ್ಮ ಜಾತಿಯನ್ನು 2002ರಲ್ಲಿ ಹೈಜಾಕ್ ಮಾಡಿ ಭೋವಿ ವಡ್ಡರ ಪೀಠ ಸ್ಥಾಪಿಸಿಕೊಂಡಿದ್ದಾರೆ. ಈಗ ನಮ್ಮದೇ ಆದ ಪೀಠ ಸ್ಥಾಪನೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ಬೆಳಗಾವಿ ಅಧಿವೇಶನ ವೇಳೆ ನಮ್ಮ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ವೇದಿಕೆಗೆ ಆಗಮಿಸಿದ ಸಚಿವ ಶಿವರಾಜ್ ತಂಗಡಗಿ ಅವರು ಭೋವಿ ಬೇರೆ ವಡ್ಡರ ಬೇರೆ ಎಂದು ಹೇಳಿದ್ದಾರೆ. ಅವರ ಜಾತಿ ಪ್ರಮಾಣ ಪತ್ರವೂ ಸಹಿತ ವಡ್ಡರ ಎಂದು ಇದೆ. ಆದರೆ ಭೋವಿ ಪದವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.ವಡ್ಡರ ಜನಾಂಗದ ಎಲ್ಲ ಉಪ ಜಾತಿಗಳಿಗೆ ಭೋವಿ ಎಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ತಾಲೂಕು ಅಧಿಕಾರಿಗಳು ನೀಡುತ್ತಿದ್ದಾರೆ. ಇದರಿಂದ ಭೋವಿ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ಮತ್ತು ಜಾತಿ ಸಿಂಧುತ್ವ ಪ್ರಮಾಣ ಪತ್ರ ಪಡೆಯುವಲ್ಲಿ ಗೊಂದಲ ಉಂಟಾಗುತ್ತಿದ್ದು, ಭೋವಿ ಮತ್ತು ವಡ್ಡರ ಜನಾಂಗ ಬೇರೆ ಬೇರೆಯಾಗಿದ್ದು ಪ್ರವರ್ಗ-1ರಲ್ಲಿ ಬರುವ ಬಂಡಿವಡ್ಡರ, ಗಿರಣಿವಡ್ಡರ ಮತ್ತು ತುಡುಗುವಡ್ಡರ ಜನರಿಗೆ ಭೋವಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದು, ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಕ್ರಮವಾಗಿಲ್ಲ. ನ್ಯಾಯಾಲಯದ ಮೂಲಕ ನ್ಯಾಯ ಕೇಳುತ್ತೇವೆ ಎಂದು ಹೇಳಿದರು.
ಭೋವಿ ಮತ್ತು ವಡ್ಡರ ಜಾತಿಗಳ ಪ್ರತ್ಯೇಕ ಅಸ್ತಿತ್ವದ ಬಗ್ಗೆ ಸರಕಾರದಿಂದ ಅನೇಕ ಸುತ್ತೋಲೆಗಳು ಆಗಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ, ತಾಲೂಕು ತಹಸೀಲ್ದಾರರು ಭೋವಿ (ವಡ್ಡ ರಲ್ಲದ) ಜನಾಂಗದವರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಹಾಗೂ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವಾಗ ಇನ್ನಿಲ್ಲದ ಮಾನಸಿಕ ಹಿಂಸೆ ನೀಡುತ್ತಿರುವುದು ಕಂಡು ಬಂದಿದೆ. ಇದರಿಂದ 1950ರಿಂದಲೂ ಪರಿಶಿಷ್ಟ ಜಾತಿಯಲ್ಲಿ ಬರುತ್ತಿರುವ ಭೋವಿ (ವಡ್ಡರ ಲ್ಲದ) ಜನಾಂಗದವರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸರ್ಕಾರದ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆಂದು ದೂರಿದರು. ವಡ್ಡರಲ್ಲದ ಭೋವಿ ಜನಾಂಗದವರಿಗೆ ಭೋವಿ ಎಂತಲೂ ಮತ್ತು ವಡ್ಡರ ಜನಾಂಗದ ಉಪ ಜಾತಿಗಳಾದ ಓಡ್, ವಡ್ಡರ, ಕಲ್ಲುವಡ್ಡರ, ಮಣ್ಣುವಡ್ಡರ ಜನಾಂಗದವರಿಗೆ ಅವರ ಜಾತಿಗಳನ್ನು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹಾಗೂ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ. ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಜಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದದರ್ಶಿ ಯಮನಪ್ಪ ಭೋವಿ, ಪುಂಡಲೀಕ ಭೋವಿ, ಮುತ್ತು ಭೋವಿ, ಬೇಲೂರಪ್ಪ ಭೋವಿ ಮತ್ತಿತರರಿದ್ದರು.