ಜಮೀನು ದಾಖಲೆ ರಕ್ಷಣೆಗೆ ಭೂ ಸುರಕ್ಷಾ ಯೋಜನೆ ಸಹಕಾರಿ: ಡಾ. ಚಂದ್ರು ಲಮಾಣಿ

| Published : Jan 14 2025, 01:02 AM IST

ಸಾರಾಂಶ

ಹಳೆಯ, ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸುವುದೇ ಭೂ ಸುರಕ್ಷಾ ಯೋಜನೆ ಆಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆ ಭೂ ದಾಖಲೆಗಳನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಶಿರಹಟ್ಟಿ: ತಾಲೂಕು ಕಚೇರಿ, ಭೂಮಾಪನ ಇಲಾಖೆ ಹಾಗೂ ಉಪನೋಂದಣಿ ಇಲಾಖೆಗಳ ಎ ಮತ್ತು ಬಿ ವರ್ಗದ ಎಲ್ಲ ಕಡತಗಳನ್ನು ಸ್ಕ್ಯಾನ್‌ ಮಾಡಿ, ಆ ಎಲ್ಲ ದಾಖಲೆಗಳು ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸುವ ಭೂ ಸುರಕ್ಷಾ ಯೋಜನೆ ತುಂಬಾ ಸಹಕಾರಿಯಾಗಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಳೆಯ, ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸುವುದೇ ಭೂ ಸುರಕ್ಷಾ ಯೋಜನೆ ಆಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆ ಭೂ ದಾಖಲೆಗಳನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಭೂ ದಾಖಲೆಗಳು ಸಹ ಡಿಜಿಟಲೀಕರಣ ಮಾಡಿ ರಕ್ಷಣೆ ಮಾಡಲಾಗುವುದು. ಭೂ ದಾಖಲೆ ಪಡೆಯಲು ಜನರು ಕಚೇರಿಗೆ ಅಲೆಯುವಂತಿಲ್ಲ. ನೇರವಾಗಿ ಜನರಿಗೆ ಸಿಗುತ್ತದೆ. ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸುವುದನ್ನು ಅಧಿಕಾರಿಗಳು, ಸಿಬ್ಬಂದಿ ತಪ್ಪಿಸಬೇಕು. ಅಗತ್ಯ ಭೂ ದಾಖಲೆಗಳನ್ನು ಜನರಿಗೆ ವಿತರಣೆ ಮಾಡಬೇಕು ಎಂದರು.

ಒಂದು ವರ್ಷ ಅವಧಿಯಲ್ಲಿ ಎಲ್ಲ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಜಿಲ್ಲೆಗಳಲ್ಲಿ ಹಳೆಯ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಸಂರಕ್ಷಿಸಿ ಡಿಜಿಟಲೀಕರಣಗೊಳಿಸುವುದು ಈ ಯೋಜನೆಯ ಉದ್ದೇಶ ಎಂದ ಅವರು, ಈ ಯೋಜನೆಯಿಂದ ರೈತರು, ಸಾರ್ವಜನಿಕರಿಗೆ ೧೫೦ ವರ್ಷಗಳ ಹಳೆಯ ದಾಖಲೆಗಳು ಸ್ಕ್ಯಾನ್‌ ಆಗಿ ಕಂಪ್ಯೂಟರೀಕರಣಗೊಂಡು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ ಎಂದು ತಿಳಿಸಿದರು.

ಅದರಿಂದ ಮನೆಯಲ್ಲೇ ಕುಳಿತು ದಾಖಲೆ ನೋಡಲು, ಮುದ್ರಿಸಿಕೊಳ್ಳಲು ಹಾಗೂ ದೃಢೀಕೃತ ಪ್ರತಿಗಳನ್ನು ಪಡೆಯಲು ಅವಕಾಶವಾಗಲಿದೆ. ರೆಕಾರ್ಡ್‌ ರೂಂಗಳಲ್ಲಿನ ಕಡತಗಳ ಕಳ್ಳತನ, ತಿದ್ದುವುದು ಮುಂತಾದ ಅಕ್ರಮಗಳಿಗೂ ಕಡಿವಾಣ ಬೀಳಲಿದೆ ಎಂದರು.

ಶಿರಹಟ್ಟಿ ತಹಸೀಲ್ದಾರ್‌ ಅನಿಲ ಬಡಿಗೇರ, ಲಕ್ಷ್ಮೇಶ್ವರ ತಹಸೀಲ್ದಾರ್‌ ವಾಸುದೇವ ಸ್ವಾಮಿ ಮಾತನಾಡಿ, ಈಗಾಗಲೇ ೩೧ ತಾಲೂಕುಗಳಲ್ಲಿ ಆರಂಭವಾದ ಪೈಲಟ್ ಕಾರ್ಯಕ್ರಮದಡಿ ಕಡತಗಳನ್ನು ಸ್ಕ್ಯಾನ್‌ ಮಾಡಲಾಗಿದೆ. ಈ ಮಹತ್ವದ ಯೋಜನೆಯಿಂದ ತಾಲೂಕು ಕಚೇರಿಯ ಸಿಬ್ಬಂದಿಯ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು ೨೭ ಲಕ್ಷಕ್ಕೂ ಹೆಚ್ಚು ಕಡತಗಳನ್ನು ಸ್ಕ್ಯಾನ್‌ ಮಾಡಲಾಗುವುದು. ಕನಿಷ್ಠ ಒಂದು ವರ್ಷಗಳ ಕಾಲ ಸಮಯ ಹಿಡಿಯಬಹುದು ಎಂದು ಹೇಳಿದರು.

ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಬಸವರಾಜ ಪಲ್ಲೇದ, ರಾಮಣ್ಣ ಕಂಬಳಿ, ಗೂಳಪ್ಪ ಕರಿಗಾರ, ಅಶೋಕ ವರವಿ, ಪರಶುರಾಮ ಡೊಂಕಬಳ್ಳಿ, ಸಂದೀಪ ಕಪ್ಪತ್ತನವರ, ಬಸವರಾಜ ತುಳಿ, ಬಸವರಾಜ ವಡವಿ, ಫಕ್ಕೀರೇಶ ಕರಿಗಾರ, ವೀರಣ್ಣ ಅಂಗಡಿ, ಬಸವರಾಜ ನಾಯ್ಕರ, ಅಂತೋಷ ಅಸ್ಕಿ, ಶಿವರಾಜ ಜಾಧವ ಇದ್ದರು.