ಮರಿಯಮ್ಮನಹಳ್ಳಿಯಲ್ಲಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆ

| Published : Nov 02 2024, 01:18 AM IST

ಮರಿಯಮ್ಮನಹಳ್ಳಿಯಲ್ಲಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮರಿಯಮ್ಮನಹಳ್ಳಿಯ ಮುಖ್ಯ ರಸ್ತೆಯ ಉದ್ದಕ್ಕೂ ಶೋಭಾಯಾತ್ರೆಯ ಸಂಭ್ರಮ ಮುಗಿಲುಮುಟ್ಟಿತ್ತು.

ಮರಿಯಮ್ಮನಹಳ್ಳಿ: ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮದ ಸಿಂಧೂರ ಬಂಡಾರ ವಿಶೇಷ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಸ್ಥಳೀಯ ಪಪಂನಿಂದ ಆರಂಭವಾಗಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಾಣಗೊಂಡ ಬೃಹತ್‌ ವೇದಿಕೆಗೆ ಸಾಗಿದ ತಾಯಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆ ಶುಕ್ರವಾರ ಸಂಜೆ ಮರಿಯಮ್ಮನಹಳ್ಳಿಯಲ್ಲಿ ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿಸಿತು.

ಸಂಜೆ ಸೂರ್ಯ ತಾಯಿಯ ಮಡಿಲನ್ನು ಸೇರುವ ತವಕದಲ್ಲಿದ್ದಾಗ ಇತ್ತ ಮರಿಯಮ್ಮನಹಳ್ಳಿಯ ಮುಖ್ಯ ರಸ್ತೆಯ ಉದ್ದಕ್ಕೂ ಶೋಭಾಯಾತ್ರೆಯ ಸಂಭ್ರಮ ಮುಗಿಲುಮುಟ್ಟಿತ್ತು. ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ನ ಮುಂದೆ ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕ ಕೆ.ನೇಮಿರಾಜ್ ನಾಯ್ಕ ಪುಷ್ಪಾರ್ಚನೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ತಾಯಿ ಭುವನೇಶ್ವರಿ ಭಾವಚಿತ್ರದ ಶೋಭಾಯಾತ್ರೆಯ ಮೆರವಣಿಗೆಯ ಮುಂಭಾಗದಲ್ಲಿ ಲೋಕಪ್ಪನಹೊಲದ ಕಹಳೆ ವಾದನ ಕಲಾವಿದರ ಕಹಳೆ ವಾದನವು ಸಿಂಧೂರ ಬಂಡಾರ ಕಾರ್ಯಕ್ರಮಕ್ಕೆ ಶುಭ ಕೋರಿದಂತಿತ್ತು. ಶೋಭಾಯಾತ್ರೆಯಲ್ಲಿ ಶಾಸಕ ಕೆ. ನೇಮರಾಜ್‌ ನಾಯ್ಕ ಸಾಂಪ್ರದಾಯಿಕ ಶೈಲಿಯ ಉಡುಪು ಧರಿಸಿ ಕರ್ನಾಟಕ ರಾಜ್ಯೋತ್ಸವದ ಸಿಂಧೂರ ಬಂಡಾರ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಿರುವುದು ವಿಶೇಷವಾಗಿತ್ತು.

ಹಸಿರು ಸೀರೆಯನ್ನುಟ್ಟುಕೊಂಡ ಗರಗ ಗ್ರಾಮದ ಬಾಲಕಿಯರು ಕೋಲಾಟ, ಕೊಟ್ಟೂರು ತಾಲೂಕಿನ ಚಪ್ಪರದಳ್ಳಿಯ ನಂದಿಕೋಲು, ನಂದಿಧ್ವಜ, ಸಮಳ ಮೇಳ, ದಾವಣಗೇರಿಯ ನಾಸಿಕ್‌ ಡೋಲು, ಚಿತ್ರದುರ್ಗದ ದೊಡ್ಡಜೆಲ್ಲೂರಿನ ಬೈಲಾಂಜನೇಯಸ್ವಾಮಿ ಜಾನಪದ ಕಲಾ ತಂಡದಲ್ಲಿ ವೀರಾಂಜಿನೇಯಮೂರ್ತಿ ವೇಷದಾರಿ, ಉಗ್ರನರಸಿಂಹ ವೇಷ, ಮಹಿಷಿ ವೇಷ, ಯಕ್ಷಗಾನದ ಪಾತ್ರಧಾರಿಗಳ ಕಲಾವಿದರ ವೇಷಧಾರಿ, ಮಂಗಳೂರಿನ ಹುಲಿಕುಣಿತ, ಹಂಪಾಪಟ್ಟಣದ ಆನೆಕಲ್ಲುನ ಸುಡುಗಾಡು ಸಿದ್ದರು, ಚಿಕ್ಕಮಂಗಳೂರಿನ ಹಡಗಲು ಗ್ರಾಮದ ಡೊಳ್ಳುಕುಣಿತ, ಹಗರಿಬೊಮ್ಮನಹಳ್ಳಿಯ ಹಗಲುವೇಷರ ವೇಷಗಳು ವೀಕ್ಷಕರ ಕಣ್ಮನ ಸೆಳೆಯಿತು.

ಕಲಾತಂಡಗಳು ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದವು. ಶೋಭಾಯಾತ್ರೆಯು ನೋಡುಗರನ್ನು ವರ್ತಮಾನದಿಂದ ಇತಿಹಾಸಕ್ಕೆ ಎಳೆದೊಯ್ಯುಂತೆ ಭಾಸವಾಯಿತು.

ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 25ಕ್ಕೂ ಹೆಚ್ಚು ಕಲಾ ತಂಡಗಳು ವಿವಿಧ ಕಲಾಪ್ರಕಾರಗಳನ್ನು ಪ್ರದರ್ಶಿಸುತ್ತಾ, ಪ್ರೌಢಶಾಲಾ ಆವರದ ಬಳಿ ನಿರ್ಮಾಣವಾಗಿದ್ದ ವೇದಿಕೆಯ ಬಳಿ ಸಾಗಿದವು. ಜಾನಪದ ಐಸಿರಿಯನ್ನು ಜನಸಾಮಾನ್ಯರು ತಮ್ಮ ಕಣ್ಣಲ್ಲಿ ತುಂಬಿಕೊಳ್ಳಲು ರಸ್ತೆಯಲ್ಲಿ ನೆರೆದಿರುವ ದೃಷ್ಯವನ್ನು ನೋಡಲು ಎರಡು ಕಣ್ಣು ಸಾಲದಾಗಿತ್ತು.

ಎಲ್ಲ ಕಲಾತಂಡಗಳು ಅದ್ಭತ ಪ್ರದರ್ಶನ ನೀಡಿದರು. ಮೆರವಣಿಗೆಯನ್ನು ಸ್ಮರಣೀಯವಾಗಿಸಿಕೊಳ್ಳಲು ಕೆಲವರು ತಮ್ಮ ಮೊಬೈಲ್‌ಗಳಿಂದ ವಿಡಿಯೋ ಮತ್ತು ಭಾವಚಿತ್ರಗಳನ್ನು ಕಿಕ್ಕಿಸಿಕೊಳ್ಲುತ್ತಿದ್ದರೆ, ಇನ್ನು ಕೆಲವರು ಮೆರಣಿಗೆಯಲ್ಲಿ ತಾವೂ ಸಾಗುತ್ತಾ ವೀಡಿಯೋ ದೃಷ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದು ಕಂಡು ಬಂದಿತು. ಅನೇಕ ಕಲಾತಂಡಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟುಕೊಳ್ಳತ್ತಿದ್ದರು.