ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ದೇಶವೆಂದರೆ ಜನವಲ್ಲ ದೇವಸ್ಥಾನವೆಂಬ ಭಾವನೆ ತುಂಬಲಾಗಿದೆ ಎಂದು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ಬಿ ಸುರೇಶ್ ಳಿಸಿದರು.
ನಗರದ ರಂಗಾಯಣದ ಭೂಮಿಗೀತದಲ್ಲಿ ರಂಗಾಯಣ ಮತ್ತು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಂಯುಕ್ತವಾಗಿ ಆಯೋಜಿಸಿರುವ ಮೈಸೂರು ಸಂಕ್ರಾಂತಿ ರಂಗಹಬ್ಬ- ನಾಟಕೋತ್ಸವನನ್ನು ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿಯು ನಿಜಾಂಶವನ್ನು ತಿಳಿಸಿ, ಜನರ ಪ್ರಾಮುಖ್ಯತೆಯನ್ನು ತಿಳಿಸುವ ಪ್ರಯೋಗ ಮಾಡಬೇಕಾದ ಅಗತ್ಯವಿದೆ ಎಂದರು.
ನಾಟಕಗಳು ಮನುಷ್ಯನ ಸಹಬಾಳ್ವೆಯನ್ನು ಪ್ರತಿನಿಧಿಸುತ್ತವೆ. ಅಲ್ಲಿ ಬರುವ ವಿಚಾರಗಳು ಸೌಹಾರ್ದ, ಸಮಾನತೆ, ಸ್ವತಂತ್ರವಾದ ಬದುಕು ಕಟ್ಟುವ ಬಗೆಯನ್ನು ತಿಳಿಸುತ್ತದೆ. ವಿಜ್ಞಾನಿ, ವೈದ್ಯ ಅಥವಾ ಇನ್ನಿತರ ವೃತ್ತಿಪರರನ್ನು ಸೃಷ್ಟಿಸಲು ಸಾಧ್ಯ. ಆದರೆ, ಕಲಾವಿದರನ್ನು ಸೃಷ್ಟಿಸುವುದು ಅಸಾಧ್ಯ ಎಂದು ಅವರು ಹೇಳಿದರು.
ಕಲೆ ಶಾಶ್ವತವಾದದ್ದು. ಅದರ ಮೂಲಕ ಅಮೂಲ್ಯವಾದ ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯ. ಹೀಗಾಗಿ ರಂಗಭೂಮಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಮೈಸೂರಿನ ಜನ ರಂಗಭೂಮಿಯ ಪ್ರಯೋಗಗಳಿಗೆ ತೆರೆದುಕೊಂಡಿದ್ದಾರೆ. ಹೊಸ ಪ್ರಯೋಗಗಳಿಗೆ ನೀರೆರೆದು ಬೆಳೆಸಿದ್ದಾರೆ. ಹೀಗಾಗಿ, ಇನ್ನಷ್ಟು ಸಾಹಿತ್ಯ ಹಾಗೂ ರಂಗಭೂಮಿಯ ಕೆಲಸಗಳು ನಡೆಯಲಿ ಎಂದು ಅವರು ಆಶಿಸಿದರು.
ರಂಗಾಯಣ ಹಾಗೂ ಹವ್ಯಾಸಿ ರಂಗಕರ್ಮಿಗಳು ಒಂದಾಗಿ ಕೆಲಸ ಮಾಡುತ್ತಿರುವುದು ಮಾದರಿ ಆಗಿದೆ. ರಂಗಾಯಣದ ವೃತ್ತಿಪರತೆ ಹಾಗೂ ಹವ್ಯಾಸಿಗಳ ಉತ್ಸಾಹ ಸೇರಿಕೊಂಡಾಗ ಅದ್ಭುತ ಸೃಷ್ಟಿಯಾಗಲು ಸಾಧ್ಯ.
ರಂಗಾಯಣದಲ್ಲಿ ಪೂರ್ಣಾವಧಿ ಕಲಾವಿದರು ಕೆಲವೇ ಜನ ಉಳಿದುಕೊಂಡ ಕಾಲದಲ್ಲಿ ಈ ರೀತಿಯ ಚಟುವಟಿಕೆ ಹೊಸ ಉತ್ಸಾಹ ತುಂಬುತ್ತವೆ. ವೃತ್ತಿಪರರನ್ನು ನೋಡಿ ಹವ್ಯಾಸಿ ತಂಡಗಳು ಗಟ್ಟಿಯಾಗಿ ನೆಲೆಯೂರುತ್ತವೆ. ಹೀಗಾದಾಗ ನಗರದಲ್ಲಿ ಆರೋಗ್ಯಕರ ವಾತಾವರಣ ಇರುತ್ತದೆ ಎಂದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಅಧ್ಯಕ್ಷ ಎಚ್.ಎಸ್. ಸುರೇಶ್ ಬಾಬು, ಕಾರ್ಯಕ್ರಮ ಸಂಘಟಕರಾದ ಹರಿದತ್, ಕುಮಾರಸ್ವಾಮಿ ಮೊದಲಾದವರು ಇದ್ದರು.