ಯರಗುಪ್ಪಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಅಮೃತ ಸರೋವರ ಯೋಜನೆಯಡಿ ₹ 44.36 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೆರೆ ಅಭಿವೃದ್ಧಿ (ಸ್ಟೋನ್ ಪಿಚ್ಚಿಂಗ್) ಕಾಮಗಾರಿಗೆ ಒಂದೇ ದಿನ ಎರಡು ಬಾರಿ ಭೂಮಿಪೂಜೆ ನಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕುಂದಗೋಳ:
ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಅಮೃತ ಸರೋವರ ಯೋಜನೆಯಡಿ ₹ 44.36 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೆರೆ ಅಭಿವೃದ್ಧಿ (ಸ್ಟೋನ್ ಪಿಚ್ಚಿಂಗ್) ಕಾಮಗಾರಿಗೆ ಒಂದೇ ದಿನ ಎರಡು ಬಾರಿ ಭೂಮಿಪೂಜೆ ನಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಶನಿವಾರ ಬೆಳಗ್ಗೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಆರ್. ಪಾಟೀಲ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಅಮೃತ ಸರೋವರ ಯೋಜನೆಯಡಿ ಕೆರೆಗಳ ಅಭಿವೃದ್ಧಿಯಿಂದ ಮಳೆ ನೀರು ಸಂಗ್ರಹಣೆ ಹೆಚ್ಚಾಗಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು, ರೈತರು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಜಲ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಾಲತೇಶ ಶ್ಯಾಗೋಟಿ, ಉಮೇಶ ಹೆಬಸೂರು, ರವಿಗೌಡ್ರು ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.ಕಾಂಗ್ರೆಸ್‌ನಿಂದಲೂ ಭೂಮಿ ಪೂಜೆ:
ಇದೇ ಕಾಮಗಾರಿಗೆ ಸಂಜೆ ವೇಳೆ ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಅವರ ಪ್ರಯತ್ನದಿಂದಲೇ ಈ ಕಾಮಗಾರಿ ಮಂಜೂರಾಗಿದ್ದು, ಅವರ ಆಶಯದಂತೆ ಭೂಮಿಪೂಜೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಶಿವಳ್ಳಿ ಮಾತನಾಡಿ, ಅಮೃತ ಸರೋವರ ಯೋಜನೆಯಿಂದ ಗ್ರಾಮದಲ್ಲಿ ನೀರಿನ ಸಂರಕ್ಷಣೆ, ಅಂತರ್ಜಲ ಮಟ್ಟದ ಹೆಚ್ಚಳ ಹಾಗೂ ಪರಿಸರ ಸಮತೋಲನಕ್ಕೆ ಮಹತ್ವದ ನೆರವಾಗಲಿದೆ ಎಂದರು.
ಕುಂದಗೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಉಪ್ಪಿನ ಮಾತನಾಡಿ, ಕಾಮಗಾರಿ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಗ್ರಾಮಸ್ಥರಿಗೆ ಹೆಚ್ಚಿನ ಪ್ರಯೋಜನವಾಗಲಿ ಎಂದರು.ಈ ವೇಳೆ ಅಡಿವೆಪ್ಪ ಶಿವಳ್ಳಿ, ಹನಮಂತ ಕಂಬಳಿ, ರಮೇಶ ನಾಯ್ಕರ, ಯಲ್ಲಪ್ಪ ಗೊಬ್ಬರಗುಂಪಿ, ಮುತ್ತಣ್ಣ ಸಂಕ್ಲಿಪೂರ, ಸಲೀಮ್ ಕಡ್ಲಿ, ಗುರು ಛಲವಾದಿ, ಸಂಜೀವ ತಹಶೀಲ್ದಾರ್, ಈರಣ್ಣ ಮಾಯಣ್ಣವರ, ಗುರುಸಿದ್ದಪ್ಪ ಅಯ್ಯನವರ ಸೇರಿ ಹಲವರಿದ್ದರು. ಒಂದೇ ಕಾಮಗಾರಿಗೆ ಒಂದೇ ದಿನ ಬಿಜೆಪಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಭೂಮಿಪೂಜೆ ನೆರವೇರಿಸಿರುವುದು ಸ್ಥಳೀಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಯೋಜನೆಯ ಶ್ರೇಯಸ್ಸಿನ ವಿಚಾರದಲ್ಲಿ ಎರಡೂ ಪಕ್ಷಗಳು ತಮ್ಮದೇ ಹಕ್ಕು ಪ್ರತಿಪಾದಿಸಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.