ಕನ್ನಡಪ್ರಭ ವಾರ್ತೆ ಮಂಡ್ಯ
ದರೋಡೆಕೋರರು ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿ ೧೭೦ ಗ್ರಾಂ ಚಿನ್ನ, ೮ ಕೆಜಿ ಬೆಳ್ಳಿ ದರೋಡೆ ಮಾಡಿದ್ದಾರೆಂದು ನಾಟಕವಾಡಿದ್ದ ಚಿನ್ನದ ವ್ಯಾಪಾರಿಯೊಬ್ಬ ಜೈಲುಪಾಲಾಗಿರುವ ಘಟನೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಮಹಾಲಕ್ಷ್ಮೀ ಜ್ಯೂವೆಲರ್ಸ್ ಮಾಲೀಕ ಜಿತೇಂದ್ರ ಜೈಲುಪಾಲಾದ ವ್ಯಾಪಾರಿ. ರಾಜಸ್ಥಾನ ಮೂಲದವನಾಗಿರುವ ಜಿತೇಂದ್ರ ಕಳೆದ ಒಂದೂವರೆ ವರ್ಷದಿಂದ ಕ್ಯಾತನಹಳ್ಳಿಯಲ್ಲಿ ಚಿನ್ನದ ಅಂಗಡಿ ಶುರು ಮಾಡಿದ್ದನು. ಫೆ.೧೦ರಂದು ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ ದರೋಡೆಕೋರರು ಅಂಗಡಿಯಲ್ಲಿದ್ದ ೧೭೦ ಗ್ರಾಂ ಚಿನ್ನ, ೮ ಕೆಜಿ ಬೆಳ್ಳಿಯನ್ನು ಕದ್ದೊಯ್ದಿರುವುದಾಗಿ ಪೊಲೀಸರಿಗೆ ತಿಳಿಸಿದ್ದನು. ಆದರೆ, ಈ ವಿಚಾರವಾಗಿ ಯಾವುದೇ ದೂರು ನೀಡಿರಲಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.
ಆ್ಯಸಿಡ್ ದಾಳಿಯಿಂದ ಮುಖದ ಒಂದು ಭಾಗದಲ್ಲಿ ಮಾತ್ರ ಕಲೆ ಇದ್ದು, ಕಣ್ಣಿನ ಭಾಗದಲ್ಲಿ ಯಾವ ಕಲೆಯೂ ಇರಲಿಲ್ಲ. ಜೊತೆಗೆ ನನಗೆ ತುಂಬಾ ಉರಿ ಇತ್ತು. ಪ್ರಜ್ಞೆ ತಪ್ಪುವಂತಹ ಸ್ಪ್ರೇಯನ್ನು ಮುಖಕ್ಕೆ ಹಾಕಿದ್ದರಿಂದ ನನಗೆ ತಕ್ಷಣಕ್ಕೆ ದೂರು ಕೊಡಲಾಗಲಿಲ್ಲವೆಂದು ಸಿನಿಮೀಯ ಮಾದರಿಯಲ್ಲಿ ಕತೆ ಹೆಣೆದಿದ್ದನು. ಈತನ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾ, ಡಿವಿಆರ್‌ನ್ನು ದರೋಡೆಕೋರರು ಕದ್ದೊಯ್ದಿದ್ದರೆಂದು ಪೊಲೀಸರನ್ನು ನಂಬಿಸಿದ್ದನು.ಪೊಲೀಸರು ತನಿಖೆ ಆರಂಭಿಸಿದಾಗ ಆ್ಯಸಿಡ್ ದಾಳಿ ಬಳಿಕ ಈತ ಸಂಪರ್ಕಿಸಿದ ಎಲ್ಲರನ್ನೂ ಕರೆಸಿ ವಿಚಾರಣೆ ನಡೆಸಿದರು. ಈ ಸಮಯದಲ್ಲಿ ಒಬ್ಬರು ರಾತ್ರಿ ೯ ಗಂಟೆ ಸಮಯದಲ್ಲಿ ಸಿಸಿ ಕ್ಯಾಮೆರಾ ಫೂಟೇಜ್ ನೋಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದರು. ಮಧ್ಯಾಹ್ನ ೩ ಗಂಟೆಗೆ ಕದ್ದೊಯ್ದರೆನ್ನಲಾದ ಸಿಸಿ ಕ್ಯಾಮೆರಾ ಫೂಟೇಜ್ ರಾತ್ರಿ ನೋಡಲು ಹೇಗೆ ಸಾಧ್ಯ ಎಂಬ ಮಾಹಿತಿ ಆಧರಿಸಿ ವಿಚಾರಣೆ ನಡೆಸಿದಾಗ ಜಿತೇಂದ್ರನ ಆ್ಯಸಿಡ್ ದಾಳಿಯ ಅಸಲಿ ಬಣ್ಣ ಬಯಲಾಯಿತು.
ಜಿತೇಂದ್ರನೇ ತನ್ನ ಸ್ನೇಹಿತ ಆರ್ಯನ್‌ನನ್ನು ಅಂಗಡಿಗೆ ಕರೆಸಿಕೊಂಡು ೧ ಕೆಜಿ ಬೆಳ್ಳಿ, ೮ ಗ್ರಾಂ ಚಿನ್ನವನ್ನು ಕೊಟ್ಟು ಕಳುಹಿಸಿದ್ದನು. ಈತ ಮೈಸೂರಿನಿಂದ ಚಿನ್ನವನ್ನು ಸಾಲದ ರೂಪದಲ್ಲಿ ತರುತ್ತಿದ್ದನು. ಒಂದು- ಒಂದೂವರೆ ತಿಂಗಳಲ್ಲಿ ಹಣ ಕಟ್ಟಬೇಕಿತ್ತು. ಅದಕ್ಕಾಗಿ ದರೋಡೆ ನಾಟಕವಾಗಿ ಅಂಗಡಿ ಮುಚ್ಚಿ ರಾಜಸ್ಥಾನಕ್ಕೆ ಪರಾರಿಯಾಗುವ ಸಂಚಿನೊಂದಿಗೆ ಈ ನಾಟಕವಾಡಿದ್ದನು ಎನ್ನುವುದನ್ನು ಜಿತೇಂದ್ರ ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಈತ ಮುಖಕ್ಕೆ ಚಿನ್ನದ ಪರಿಶುದ್ಧತೆ ಪರೀಕ್ಷಿಸುವ ರಾಸಾಯನಿಕವನ್ನು ಹಚ್ಚಿಕೊಂಡಿದ್ದರಿಂದ ಅದು ಆ್ಯಸಿಡ್ ದಾಳಿಯಂತೆಯೇ ಕಲೆಯಿರುವುದು ಕಂಡುಬಂದಿತ್ತು. ಅದು ಅಷ್ಟೊಂದು ಅಪಾಯಕಾರಿಯಾಗಿಲ್ಲದಿರುವುದು ಗೊತ್ತಿದ್ದೇ ಜಿತೇಂದ್ರ ಕಣ್ಣಿನ ಭಾಗ ಬಿಟ್ಟು ಕೆನ್ನೆ ಮತ್ತು ಹಣೆಯ ಮೇಲೆ ಹಚ್ಚಿಕೊಂಡಿದ್ದನು. ಅದು ಸ್ವಲ್ಪ ಪ್ರಮಾಣದಲ್ಲಿ ಚರ್ಮ ಸುಟ್ಟಂತೆ ಕಂಡುಬಂದಿತ್ತು. ಇದನ್ನೇ ಆ್ಯಸಿಡ್ ದಾಳಿ ಎಂದು ಬಿಂಬಿಸಲು ಯತ್ನಿಸಿದ್ದನು. ಅಲ್ಲದೆ, ಕೆರೆಯೊಂದರಲ್ಲಿ ಬಿಸಾಡಿದ್ದ ಡಿವಿಆರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇರೆಗೆ ಜಿತೇಂದ್ರನನ್ನು ಪಾಂಡವಪುರ ಪೊಲೀಸರು ಬಂಧನಕ್ಕೊಳಪಡಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.-----
ಜಿತೇಂದ್ರ ಮೈಸೂರಿನಲ್ಲಿ ಸಾಲದ ಆಧಾರದಲ್ಲಿ ಎಷ್ಟು ಚಿನ್ನ- ಬೆಳ್ಳಿ ಖರೀದಿಸಿದ್ದ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಆತ ರಾಜಸ್ಥಾನಕ್ಕೆ ವಾಪಸ್ ತೆರಳುವ ಉದ್ದೇಶದಿಂದ ಆ್ಯಸಿಡ್ ದಾಳಿ ನಾಟಕವಾಡಿದ್ದಾನೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಆಧಾರದ ಮೇಲೆ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ