ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡಿನ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಲಿಂಗನಮಕ್ಕಿ ಯೋಜನೆಯ ಸಂತ್ರಸ್ತರಿಗಾಗಿ ಅಂದೇ ದೊಡ್ಡ ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಭೂಪಾಳಂ ಚಂದ್ರಶೇಖರಯ್ಯ ಎಂದು ಅಂಕಣಕಾರ ಬಿ.ಚಂದ್ರೇಗೌಡ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೋಪಾಲಗೌಡ ಬಡಾವಣೆಯ ಶ್ರೀ ಸಿದ್ಧಿ ಬುದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಬೆಂಗಳೂರಿನ ಬಿ.ಸಿ.ಪ್ರಭಾಕರ ತಮ್ಮ ತಂದೆ ಭೂಪಾಳಂ ಆರ್.ಚಂದ್ರಶೇಖರಯ್ಯ ಕುರಿತ ಸ್ಮಾರಕ ದತ್ತಿನಿಧಿ ಕಾರ್ಯಕ್ರಮದಲ್ಲಿ ಅವರ ಬದುಕು ಬರಹ ಕುರಿತು ಮಾತನಾಡಿ ನಮ್ಮ ಸುತ್ತಲಿನ ಪರಿಸರ ಉಳಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದು, ಅದರ ಪರಿಣಾಮ ಎದುರಿಸುತ್ತಿದ್ದೇವೆ. ನೂರು ವರ್ಷದ ಇತಿಹಾಸವಿರುವ ಕಾರ್ಖಾನೆ ಉಳಿಸಲು ರಾಜಕಾರಣಕ್ಕೆ ಧ್ವನಿಯಿಲ್ಲವಾಗಿದ್ದು ದುರಂತ. ದೆಹಲಿಯಲ್ಲಿ ಗಾಂಧೀಜಿ ಹೇಳಿದ್ದನ್ನು ಇಲ್ಲಿ ಅನುಷ್ಠಾನ ಮಾಡುತ್ತಿದ್ದ ಭೂಪಾಳಂ ಚಂದ್ರಶೇಖರಯ್ಯ ದಲಿತರ ಕೇರಿಗೆ ಹೋಗಿ ಶಿಕ್ಷಣ ನೀಡಿದರು. ಸ್ವಚ್ಛತಾ ಜಾಗೃತಿ, ಅಸ್ಪೃಶ್ಯತೆ ತೊಲಗಿಸುವ ಪ್ರಯತ್ನ ಮಾಡಿದರು. ಸಾಮಾಜಿಕ, ಸ್ವಾತಂತ್ರ್ಯ ಚಳವಳಿಗೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಕುವೆಂಪು ಅವರ ಬಾಲ್ಯದ ಗೆಳೆಯರಾಗಿದ್ದ ಇವರು ಪ್ರತಿಭಾವಂತರಾಗಿದ್ದರು. ಕುಪ್ಪಳಿಗೆ ಕುವೆಂಪು ಬಂದಿರುವ ಸುದ್ದಿ ಕೇಳಿ ತೀರ್ಥಹಳ್ಳಿಯಿಂದ ಬೈಸಿಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಬರೆಯುವ ಓದುವ ಹವ್ಯಾಸ ರೂಢಿಸಿಕೊಂಡಿದ್ದರಿಂದ ಮಲೆನಾಡು ವಾರ್ತಾ ಪತ್ರಿಕೆ ನಡೆಸಿದ್ದು, ಕುವೆಂಪು ಅವರ ರಾಮಾಯಣವನ್ನು ಸರಳವಾಗಿ ವಚನ ಭಾಷೆಯಲ್ಲಿ ಭಾಷಾಂತರ ಮಾಡಿದ ಪ್ರತಿಭಾವಂತರು ಎಂದು ವಿವರಿಸಿದರು.ದೀಪ ಬೆಳಗಿಸಿ ಭೂಪಾಳಂ ಶಶಿಧರ ಮಾತನಾಡಿ, ಭೂಪಾಳಂ ಕುಟುಂಬದ ಸದಸ್ಯರು ನಾವು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಅವರ ಸೇವೆ ಸ್ಮರಣೀಯ ಎಂದು ವಿವರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಉದ್ಯಮಿ ಶಿವಸ್ವಾಮಿ ಭೂಪಾಳಂ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಟಿ.ವಿ.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್ ಉಪಸ್ಥಿತರಿದ್ದರು.ಎಸ್.ಷಣ್ಮುಖಪ್ಪ ಸ್ವಾಗತಿಸಿ, ಡಿ. ಗಣೇಶ್ ನಿರೂಪಿಸಿದರು. ಹವ್ಯಾಸಿ ಕಲಾವಿದರ ಸಂಘ ದವರು ವಿವಿಧ ಗೀತೆಗಳ ಹಾಡಿದರು.