ಸಾರಾಂಶ
ಬಾಳೆಹೊನ್ನೂರು ಸಮೀಪದ ತುಪ್ಪೂರು ಬಿರೇಕಲ್ಲು ಭೂತೇಶ್ವರಸ್ವಾಮಿ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿಹಬ್ಬವು ಸಂಭ್ರಮ ಸಡಗರದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಸಮೀಪದ ತುಪ್ಪೂರು ಬಿರೇಕಲ್ಲು ಭೂತೇಶ್ವರ ಸ್ವಾಮಿ ಹಾಗೂ ದುರ್ಗಾಪರಮೇಶ್ವರಿ ಮತ್ತು ಪರಿವಾರ ದೇವತೆಗಳ ವಾರ್ಷಿಕ ಸುಗ್ಗಿ ಹಬ್ಬವು ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.ಸುಗ್ಗಿಹಬ್ಬದ ಅಂಗವಾಗಿ ಚೌತ (ವ್ರತ) ಆರಂಭಿಸಿದ ಗ್ರಾಮಸ್ಥರು ಪೂಜಾದಿಗಳಲ್ಲಿ ಪಾಲ್ಗೊಂಡರು. ಶನಿವಾರದ ಮೊದಲ ದಿನ ರಾತ್ರಿ ದೇವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಹೊರತಂದು ವಿಶೇಷ ಪೂಜೆ ಸಲ್ಲಿಸಿ ಸುಗ್ಗಿಗದ್ದೆಯಲ್ಲಿ ಸುಗ್ಗಿ ಕುಣಿತ ನಡೆಸಲಾಯಿತು.
ಎರಡನೇ ದಿನವಾದ ಭಾನುವಾರ ಬಿರೇಕಲ್ಲು ಭೂತೇಶ್ವರ, ದುರ್ಗಾಪರಮೇಶ್ವರಿ ಅಮ್ಮನವರು, ಗಣಪತಿ ದೇವಸ್ಥಾನ, ಮಲೆಯಾಳಿ ಜಟ್ಟಿಗ ದೇವಸ್ಥಾನ, ಹುಲಿ ಚೌಡೇಶ್ವರಿ ದೇವಸ್ಥಾನ, ಬಸವೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.ವ್ರತಧಾರಿ ಗ್ರಾಮಸ್ಥರು ದೇವರ ಉತ್ಸವ ಮೂರ್ತಿಗಳೊಂದಿಗೆ ದೇವಾಲಯದ ಆವರಣದಲ್ಲಿ ಸುಗ್ಗಿಕುಣಿದು ಸಂಭ್ರಮಿಸಿದರು. ನಂತರ ದೇವರುಗಳನ್ನು ಗುಡಿ ತುಂಬುವ ಕಾರ್ಯಕ್ರಮ ನಡೆಯಿತು. ಇದೇ ವೇಳೆ ದೇವಾಲಯದ ದರ್ಶನ ಪಾತ್ರಿಯಿಂದ ಹೇಳಿಕೆ ಕೇಳಿಕೆ, ಭಕ್ತರಿಂದ ಸೇವಾಧಿಗಳು ನೆರವೇರಿದವು.
ಸುಗ್ಗಿಹಬ್ಬದಲ್ಲಿ ತುಪ್ಪೂರು, ಹಿರೇಗದ್ದೆ, ಹೂವಿನಹಕ್ಲು, ಮೇಲ್ಪಾಲ್, ಕರ್ಕೇಶ್ವರ ಕೈಮರ, ಕುಂಜಳ್ಳಿ, ಸಿಗಸೆ, ಅರಳೀಕೊಪ್ಪ, ಮೆಣಸುಕೊಡಿಗೆ, ರಂಭಾಪುರಿಮಠ, ಬಾಳೆಹೊನ್ನೂರು, ಮಾಗುಂಡಿ, ಹುಯಿಗೆರೆ, ಕಡಬಗೆರೆ, ಸಂಗಮೇಶ್ವರಪೇಟೆ, ಹೇರೂರು, ಸಿಆರ್‌ಎಸ್, ಸೀಗೋಡು ಸೇರಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಗೌರಿಗದ್ದೆ ದತ್ತಾಶ್ರಮದ ವತಿಯಿಂದ ಅವಧೂತ ವಿನಯ್ ಗುರೂಜಿ ಅವರ ಮಾರ್ಗದರ್ಶನದಂತೆ ಭಕ್ತರಿಗೆ ಮಜ್ಜಿಗೆ ಸೇವೆ ಮಾಡಲಾಯಿತು.;Resize=(128,128))
;Resize=(128,128))