ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರತಿ ತಿಂಗಳು ರೇವತಿ ನಕ್ಷತ್ರದ ಶುಭ ದಿನದಂದು ಭೂವರಹನಾಥಸ್ವಾಮಿಗೆ ವಿಶೇಷವಾಗಿ ಅಭಿಷೇಕ, ಪುಷ್ಪಾಭಿಷೇಕ ಮಾಡಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಗಿದೆ ಎಂದು ಭೂವರಹನಾಥ ದೇವಾಲಯದ ವ್ಯವಸ್ಥಾನಾ ಸಮಿತಿ ಸಂಚಾಲಕ ಡಾ.ಶ್ರೀನಿವಾಸರಾಘವನ್ ಹೇಳಿದರು.ತಾಲೂಕಿನ ವರಾಹನಾಥ ಕಲ್ಲಹಳ್ಳಿಯ ಭೂ ವರಾಹನಾಥ ಕ್ಷೇತ್ರದಲ್ಲಿ ಭೂದೇವಿ ಸಮೇತ ಶ್ರೀಲಕ್ಷ್ಮೀವರಹನಾಥಸ್ವಾಮಿಯ 17 ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲಾಮೂರ್ತಿಗೆ ಅಭಿಷೇಕ, ಪುಷ್ಪಾಭಿಷೇಕ ನಡೆಸಿ ಧಾರ್ಮಿಕ ಉಪನ್ಯಾಸ ನೀಡಿದರು.
ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನ ಹಾಲು, ಐನೂರು ಲೀಟರ್ ಎಳನೀರು, ಜೇನುತುಪ್ಪ, ಮೊಸರು, ಹಸುವಿನ ತುಪ್ಪ, ಸುಗಂದ ದ್ರವ್ಯಗಳು, ಅರಿಶಿನ, ಶ್ರೀಗಂಧ ಸೇರಿದಂತೆ ಮಲ್ಲಿಗೆ ಜಾಜಿ, ಸಂಪಿಗೆ, ಸೇವಂತಿಗೆ, ತುಳಸಿ, ಪವಿತ್ರ ಪತ್ರೆಗಳು, ಧವನ, ಗುಲಾಬಿ, ಕಮಲ ಸೇರಿದಂತೆ 58 ಬಗೆಯ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ನಡೆಸಲಾಗಿದೆ ಎಂದರು.ಸ್ವಾಮಿಯ ಉತ್ಸವ ಮೂರ್ತಿ ಅಡ್ಡಪಲ್ಲಕಿ ಉತ್ಸವ ಮಾಡಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಮೂಲಕ ಇಂದು ವಿಶೇಷ ಪೂಜೆ ಪುರಸ್ಕಾರಗಳು ಹಾಗೂ ಹೋಮ ಹವನಗಳನ್ನು ನಡೆಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದರು.
ಭೂಮಿ ವ್ಯಾಜ್ಯಗಳಿಂದ ಬಳಲುತ್ತಿರುವವರು, ಸ್ವಂತ ಸೂರನ್ನು ಹೊಂದಬೇಕೆಂಬ ಆಕಾಂಕ್ಷಿತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಣ್ಣು, ಇಟ್ಟಿಗೆಯನ್ನು ಪೂಜಿಸಿ ಸಂಕಲ್ಪ ಮಾಡಿ ಸ್ವಂತ ಮನೆಯನ್ನು ನಿರ್ಮಿಸಬೇಕೆಂದು ಪ್ರಾರ್ಥನೆ ನಡೆಸಿ ತೆಗೆದುಕೊಂಡು ಹೋಗಿ ಮನೆಯ ನಿರ್ಮಾಣ ಆರಂಭಿಸಿದರೆ ಸಾಕು ವರಹನಾಥ ಸ್ವಾಮಿಯು ಆಶೀರ್ವದಿಸಿ ಅನುಗ್ರಹಿಸುತ್ತಾನೆ ಎಂದರು.ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಿರುಮಲ-ತಿರುಪತಿ ಮಾದರಿಯಲ್ಲಿ ಭೂವರಹನಾಥ ಕ್ಷೇತ್ರವನ್ನು ಪರಕಾಲ ಸ್ವಾಮೀಜಿಗಳು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದಲೇ ಹೊಯ್ಸಳ ವಾಸ್ತು ಶಿಲ್ಪಕಲಾ ಮಾದರಿಯಲ್ಲಿ ದೇವಾಲಯದ ನಿರ್ಮಾಣ ಹಾಗೂ 176 ಅಡಿ ಎತ್ತರದ ಬೃಹತ್ ರಾಜಗೋಪುರ ನಿರ್ಮಾಣವಾಗಲಿದೆ ಎಂದರು.ನಾಡಿನ ಮೂಲೆಮೂಲೆಯಿಂದ ಸಾವಿರಾರು ಭಕ್ತಾಧಿಗಳು ರೇವತಿ ನಕ್ಷತ್ರದ ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಸಿಹಿಪೊಂಗಲ್, ಬಿಸಿಬೇಳೆಭಾತ್, ಮೊಸರನ್ನ ಹಾಗೂ ಸಜ್ಜಪ್ಪ ಪ್ರಸಾದವನ್ನು ವಿತರಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))