ರಾಮನಗರ: ಕೃಷಿ ಭೂಮಿ ರೈತರ ಹೃದಯ ಇದ್ದಂತೆ. ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಹೃದಯವನ್ನೇ ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡದೆ ಬಿಡದಿಯಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸೋಣ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ.ರವಿಂದ್ರನ್ ಕರೆನೀಡಿದರು
ರಾಮನಗರ: ಕೃಷಿ ಭೂಮಿ ರೈತರ ಹೃದಯ ಇದ್ದಂತೆ. ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಹೃದಯವನ್ನೇ ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡದೆ ಬಿಡದಿಯಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸೋಣ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ.ರವಿಂದ್ರನ್ ಕರೆನೀಡಿದರು.
ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ರೈತರು ನಡೆಸುತ್ತಿರುವ ಧರಣಿ ಬೆಂಬಲಿಸಿ ಕರ್ನಾಟಕ ಪ್ರಾಂತ ರೈತಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ನಡೆಸಿದ ಬೈರಮಂಗಲ ಚಲೋ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ಕಳೆದ 438 ದಿನಗಳಿಂದ ರೈತರು ರಾತ್ರಿ ಹಗಲು ಎನ್ನದೆ ಹೋರಾಟ ನಡೆಸುತ್ತಿದ್ದಾರೆ. ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ರಾಜ್ಯ ಸರ್ಕಾರಕ್ಕೆ ರೈತರ ಸಂಕಷ್ಟ ಗೊತ್ತಾಗುತ್ತಿಲ್ಲ. ಈ ಸರ್ಕಾರವನ್ನು ಎಚ್ಚರಿಸಲು ಹೋರಾಟವನ್ನು ಬೈರಮಂಗಲ ವೃತ್ತದಿಂದ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿ ನ್ಯಾಯ ದಕ್ಕಿಸಿಕೊಳ್ಳೋಣ ಎಂದು ಹೇಳಿದರು.
ಬಿಡದಿಯಿಂದ ವಿಧಾನಸೌಧ ಚಲೋ ಹೋರಾಟದಲ್ಲಿ ಕನಿಷ್ಠ 5 ಸಾವಿರ ರೈತರಾದರು ಭಾಗಿಯಾಗಬೇಕು. ಈಗಾಗಲೇ ಯೋಜನೆ ವಿರೋಧಿಸಿರುವ 3 ಸಾವಿರ ರೈತರಿದ್ದು, ಅವರೊಂದಿಗೆ ನಾವು 2 ಸಾವಿರ ರೈತರನ್ನು ಕರೆತರುತ್ತೇವೆ. ವಿಧಾನಸೌಧದ ಮೆಟ್ಟಿಲು ಇಳಿದು ಬಂದ ರಾಜ್ಯ ಸರ್ಕಾರವೇ ರೈತರ ಎದುರು ಮಂಡಿಯೂರುವಂತೆ ಹೋರಾಟ ನಡೆಸೋಣ ಎಂದು ತಿಳಿಸಿದರು.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2013ರ ಭೂ ಸ್ವಾಧೀನ ಕಾಯಿದೆ ಜಾರಿಗೆ ತಂದಿತು. ಆದರೆ, ಅದೇ ಪಕ್ಷದ ರಾಜ್ಯ ಸರ್ಕಾರ ಆ ಕಾಯಿದೆಯನ್ನು ಪಾಲನೆ ಮಾಡುತ್ತಿಲ್ಲ. ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ 26 ಹಳ್ಳಿಗಳ ಫಲವತ್ತಾದ ಕೃಷಿ ಭೂಮಿಯನ್ನು ನುಂಗಲು ಹೊರಟಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರವೀಂದ್ರನ್ ಎಚ್ಚರಿಕೆ ನೀಡಿದರು.
ಬಂಡವಾಳ ಶಾಹಿಗಳ ಅಭಿವೃದ್ಧಿ :ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವರಲಕ್ಷ್ಮಿ ಮಾತನಾಡಿ, ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ರೈತರ ಘನತೆ ಮತ್ತು ಸಮಾನತೆಯ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಜನರಿಗಾಗಿ ಇರಬೇಕು. ಆದರೆ, ಸರ್ಕಾರ ರೈತರನ್ನು ದೂರವಿಟ್ಟು ಬಂಡವಾಳ ಶಾಹಿಗಳ ಅಭಿವೃದ್ಧಿ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಹೆಸರಿನಲ್ಲಿ ರಾಜ್ಯ ಸರ್ಕಾರ ಕೆಐಎಡಿಬಿ ಮೂಲಕ ರಾಜ್ಯದಲ್ಲಿ 1 ಲಕ್ಷ 62 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಇದರಲ್ಲಿ ಸಾಕಷ್ಟು ಭೂಮಿ ಖಾಲಿ ಬಿದ್ದಿದೆ. ಹೀಗಿರುವಾಗ ಅಭಿವೃದ್ಧಿ ಹೆಸರಿನಲ್ಲಿ ಬೈರಮಂಗಲ - ಕಂಚುಗಾರನಹಳ್ಳಿ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹೊಸ ಅಧಿಸೂಚನೆ ಏಕೆ ಹೊರಡಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.ಕೃಷಿ ಭೂಮಿ ವಶಪಡಿಸಿಕೊಂಡು ನಿರ್ಮಿಸಿದ ಕಾರ್ಖಾನೆಗಳಲ್ಲಿ ರೈತರ ಮಕ್ಕಳಿಗೆ ಉದ್ಯೋಗವೇ ಸಿಗುತ್ತಿಲ್ಲ. ಲೋಕರ್ ಅಂದರೆ ಕೆಲಸ ಕೊಡದ ಪರಿಸ್ಥಿತಿ ಇದೆ. ಕೃಷಿ ಮಾಡಿಕೊಂಡು ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನ್ನದಾತನ ಭೂಮಿ ಕಸಿದುಕೊಂಡು ಆತನನ್ನು ನಿರುದ್ಯೋಗಿ ಮಾಡಿ ಬೀದಿಪಾಲು ಮಾಡಲಾಗುತ್ತಿದೆ. ಇಂತಹ ಅಭಿವೃದ್ಧಿ ಕೇಳಿದವರು ಯಾರೆಂದು ಪ್ರಶ್ನೆ ಮಾಡಿದರು.
ರಾಜ್ಯದಲ್ಲಿ ಇದೇ ಜಿಲ್ಲೆಯವರು ಹೊಸದಾಗಿ ಮುಖ್ಯಮಂತ್ರಿ ಆಗುತ್ತಿದ್ದಾರೆ. ನಿಮ್ಮ ಕುರ್ಚಿ ಎರಡು ವರ್ಷ ಮಾತ್ರ ಇರುತ್ತದೆ. ಆದರೆ, ಕೃಷಿ ಪರಕರಗಳಾದ ಕುಡ್ಲು, ನೇಗಿಲು, ಸನಿಕೆ ರೈತರ ಕೈಯಲ್ಲಿ ಸಾಯುವವರೆಗೂ ಇರುತ್ತದೆ.ಆ ನೇಗಿಲು, ಸನಿಕೆಗಳು ಮಾತನಾಡಲು ಶುರು ಮಾಡಿದರೆ ನೀವ್ಯಾರು ಉಳಿಯುವುದಿಲ್ಲ ಎಂದು ವರಲಕ್ಷ್ಮಿ ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರಾಂತ ರೈತಸಂಘ ರಾಜ್ಯಾಧ್ಯಕ್ಷ ಯು.ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ , ಸಹ ಕಾರ್ಯದರ್ಶಿ ಎನ್.ಭರತ್ ರಾಜ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಲ್.ಅಂಕಪ್ಪ, ರೈತ ಹೋರಾಟಗಾರ್ತಿ ಪ್ರಭಾ ಬೆಳವಾಡಿ, ಬೈರಮಂಗಲ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘ ಅಧ್ಯಕ್ಷ ರಾಮಯ್ಯ, ಮುಖಂಡರಾದ ಪ್ರಕಾಶ್ , ನಾಗರಾಜು, ಶ್ರೀನಿವಾಸರೆಡ್ಡಿ, ಕೃಷ್ಣ, ಮಂಜುನಾಥ್, ಕುಮಾರಸ್ವಾಮಿ, ಚೀಲೂರು ಮುನಿರಾಜು, ರೈತ ಮಹಿಳೆಯರಾದ ಭಾಗ್ಯ ನಾಗರಾಜು, ಜಯಮ್ಮ, ಸುಮಾ ಮತ್ತಿತರರು ಭಾಗವಹಿಸಿದ್ದರು.ಬಾಕ್ಸ್ ...............
ಅಬ್ಬನಕುಪ್ಪೆಯಿಂದ ಬೈರಮಂಗಲದವರೆಗೆ ರೈತರ ಮೆರವಣಿಗೆರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ಮತ್ತು ರೈತರು ಮೆರವಣಿಗೆ ನಡೆಸಿದರು.
ಅಬ್ಬನಕುಪ್ಪೆ ಬಿಎಂಟಿಸಿ ಡಿಪೋ ಬಳಿಯಿಂದ ಪ್ರಾರಂಭಗೊಂಡ ಮೆರವಣಿಗೆ ಬೈರಮಂಗಲ ವೃತ್ತದವರೆಗೆ ನಡೆಯಿತು. ಸುಮಾರು 2 ಕಿ.ಮೀ.ವರೆಗೆ ಕಾರ್ಯಕರ್ತರು ಕೆಂಪು ಮತ್ತು ಹಸಿರು ಬಾವುಟ ಹಿಡಿದು ಹೆಜ್ಜೆ ಹಾಕಿದರು.ರಾಜ್ಯಸರ್ಕಾರ ರೈತರ ಪ್ರತಿಭಟನೆಗೆ ಬೆಲೆ ನೀಡದೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದೆ. ರೈತರನ್ನು ಬೆದರಿಸುತ್ತಾ ಇಡೀ ಸರ್ಕಾರ ಬಲವನ್ನು ದುರುಪಯೋಗ ಪಡಿಸಿಕೊಂಡು ಬಡ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಟೌನ್ ಶಿಪ್ ಯೋಜನೆ ರಿಯಲ್ ಎಸ್ಟೇಟ್ ಹಿತಾಸಕ್ತಿಯ ಕಾರ್ಪೋರೇಟ್ ಭೂ ಕಬಳಿಕೆ ಉದ್ದೇಶವಾಗಿದೆ. ಇದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಕೇವಲ ಭೂಮಿಗಾಗಿ ನಡೆಸುತ್ತಿರುವ ಹೋರಾಟವಾಗದೆ ಇಡೀ ದೇಶಧ ಆಹಾರ ಭದ್ರತೆ ಹಾಗೂ ರೈತಾಪಿ ಕೃಷಿ ಉಳಿವಿಗಾಗಿ ಮತ್ತು ಜೀವ ಪರಿಸರ ಸುಸ್ತಿರಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ಸರ್ಕಾರ ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.29ಕೆಆರ್ ಎಂಎನ್ 1.ಜೆಪಿಜಿ
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ಮತ್ತು ರೈತರು ಮೆರವಣಿಗೆ ನಡೆಸಿದರು.