ಕನ್ನಡಪ್ರಭ ವಾರ್ತೆ ಮಳವಳ್ಳಿ
ಫಲವತ್ತಾದ ಸಮೃದ್ಧ ನೀರಾವರಿ ಕೃಷಿ ಭೂಮಿ ನಾಶ ಮಾಡಿ ಬಿಡದಿ ಟೌನ್ ಶಿಪ್ ಯೋಜನೆ ಮಾಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಮಾತನಾಡಿ, ಯೋಜನೆಗಾಗಿ ಸುಮಾರು 9640 ಎಕರೆ ಕೃಷಿ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿ ರಿಯಲ್ ಎಸ್ಟೇಟ್ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡು ಹೋರಾಟ ನಡೆಸುತ್ತಿರುವ ರೈತರನ್ನು ಬೆದರಿಸುತ್ತಾ ವಿವಿಧ ರೀತಿಯ ಕಿರುಕುಳ ಹಾಗೂ ದೌರ್ಜನ್ಯ ನಡೆಸುತ್ತಿದೆ ಎಂದು ಕಿಡಿಕಾರಿದರು.
ರೈತ ವಿರೋಧಿ ಯೋಜನೆಯಾಗಿರುವ ಬಿಡದಿ ಟೌನ್ ಶಿಪ್ ಅನ್ನು ಸರ್ಕಾರ ಕೂಡಲೇ ಕೈಬಿಡಬೇಕು. ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿಯಾಗಿದೆ. ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ರೈತರು ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ ಎಂದರು.ಆದರೂ ಪರಿಗಣಿಸದೇ ಕಳೆದ ಏಪ್ರಿಲ್ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದು ರೈತರ ಸಂವಿಧಾನಬದ್ಧ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಸರ್ಕಾರದ ಸರ್ವಾಧಿಕಾರಿ ಕ್ರಮವಾಗಿದೆ. ಹೀಗಾಗಿ ರೈತರ ಹೋರಾಟವನ್ನು ಬಲಪಡಿಸಿ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸದ್ಯದಲ್ಲಿಯೇ ಕರ್ನಾಟಕ ಪ್ರಾಂತ ರೈತ ಸಂಘ ಬೈರಮಂಗಲ ಚಲೋ ಹಮ್ಮಿಕೊಂಡಿದೆ ಎಂದರು.
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಗುರುತಿಸಿರುವ ಕೃಷಿ ಭೂಮಿಯು ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು, ತೋಟಗಾರಿಕೆ ಬೆಳೆಗಳಾದ ರೇಷ್ಮೆ, ಹೈನುಗಾರಿಕೆ, ಜೋಳ, ರಾಗಿ ಸೇರಿದಂತೆ ವಿವಿಧ ರೀತಿಯ ಬೆಳೆಗಳಿಂದ ಕೂಡಿದ ಹಸಿರು ಪ್ರದೇಶವಾಗಿದೆ ಎಂದರು.
ರೈತರು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆ ಜಾರಿಗೊಳಿಸಲು ಹಠ ಮಾಡುತ್ತಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ದಿನನಿತ್ಯ ಪೂರೈಸುವ ಅಮೂಲ್ಯ ಆಹಾರದ ಕಣಜವಾಗಿದೆ. ಇಲ್ಲಿನ ಎಲ್ಲ ಕೃಷಿ ಕುಟುಂಬಗಳು ತಮ್ಮ ಸಣ್ಣ ಹಿಡುವಳಿಯಲ್ಲೇ ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಬಂದಿವೆ. ಜೊತೆಗೆ ಕೃಷಿ ಆಧಾರಿತ ಸಣ್ಣ ಉದ್ದಿಮೆಗಳನ್ನು ಕಟ್ಟಿಕೊಂಡು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಎಂ.ಇ.ಮಹದೇವು, ಕಾರ್ಯದರ್ಶಿ ಗುರುಸ್ವಾಮಿ, ಮುಖಂಡರಾದ ವಿಷಕಂಠ, ಚಿಕ್ಕಮೊಗಣ್ಣ, ಮರಿಲಿಂಗೇಗೌಡ ಉಪಸ್ಥಿತರಿದ್ದರು.