ರಾಮನಗರ: ಚಳವಳಿ ನಿರತ ರೈತರನ್ನು ವಿಶ್ವಾಸಕ್ಕೆ ಪಡೆದು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ನೂತನ ಅಧ್ಯಕ್ಷ ಎಲ್.ಚಂದ್ರಶೇಖರ್ ತಿಳಿಸಿದರು
ರಾಮನಗರ: ಚಳವಳಿ ನಿರತ ರೈತರನ್ನು ವಿಶ್ವಾಸಕ್ಕೆ ಪಡೆದು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ನೂತನ ಅಧ್ಯಕ್ಷ ಎಲ್.ಚಂದ್ರಶೇಖರ್ ತಿಳಿಸಿದರು.
ನಗರದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಂದ ಒತ್ತಾಯ ಪೂರಕವಾಗಿ ಭೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಬದಲಿಗೆ ಅವರೆಲ್ಲರನ್ನು ವಿಶ್ವಾಸಕ್ಕೆ ಪಡೆದು ಬಿಡದಿ ಟೌನ್ಶಿಪ್ ಯೋಜನೆಯಶಸ್ವಿಯಾಗಿ ಕಾರ್ಯಗತಗೊಳ್ಳುವಂತೆ ಮಾಡುತ್ತೇವೆ ಎಂದರು.
ಜಿಬಿಡಿಎ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕಿರುವುದು ಸಂಭ್ರಮ ಪಡುವಂತೆ ಇದ್ದರು ಕೂಡ ಅದು ಸುಲಭದ ದಾರಿ ಅಲ್ಲ ಎಂಬುದು ನನಗೆ ಗೊತ್ತಿದೆ. ಹಿಂದಿನ ಅಧ್ಯಕ್ಷರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಟೌನ್ ಶಿಪ್ ಯೋಜನೆಯನ್ನು ಒಳ್ಳೆಯ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಅವರ ಹಾದಿಯಲ್ಲಿಯೇ ಸಾಗಿ ಇನ್ನೂ ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.ನನ್ನ ಮೇಲೆ ಭರವಸೆ ಇಟ್ಟು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನದಂತಹ ಗುರುತರವಾದ ಜವಾಬ್ದಾರಿ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಚಂದ್ರಶೇಖರ್ ಕೃತಜ್ಞತೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆ ಅಭಿವೃದ್ಧಿ ಪರವಾಗಿರುವ ಯೋಜನೆಯಾಗಿದ್ದು, ಇದರ ಅನುಷ್ಠಾನದ ಹೊಣೆ ಹೊತ್ತಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ರೈತರು ಯೋಜನೆ ಪರವಾಗಿದ್ದರೂ ಕೆಲವರು ಮಾತ್ರ ರಾಜಕೀಯ ಕಾರಣಕ್ಕಾಗಿವಿರೋಧ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ಅನೇಕ ಪ್ರಶ್ನೆ ಮತ್ತು ಸವಾಲುಗಳನ್ನು ಎದುರಿಸಿ ಬಿಡದಿ ಟೌನ್ ಶಿಪ್ ಯೋಜನೆ ನೆನೆಗುದಿಗೆ ಬಿದ್ದಿತ್ತು. ಯಾರೂ ಕಾಳಜಿ ವಹಿಸದ ಕಾರಣ ರೈತರು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದರು. ಈ ಸಮಸ್ಯೆಗೆ ಮುಕ್ತಿ ಕೊಡಬೇಕೆಂದು ನಿರ್ಧರಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯೋಜನೆಗೆ ಕಾಯಕಲ್ಪ ನೀಡಿದೆ ಎಂದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ಆಸಕ್ತಿ ವಹಿಸಿ ಹಲವಾರು ಬದಲಾವಣೆಗಳೊಂದಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದರು. ಆ ಮೂಲಕ ಸ್ಥಗಿತಗೊಂಡಿದ್ದ ಟೌನ್ ಶಿಪ್ ಯೋಜನೆಗೆ ಮರು ಜೀವ ತುಂಬುವ ಜೊತೆಗೆ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಬಿಡದಿ ಟೌನ್ ಶಿಪ್ ಮಹತ್ತರವಾದ ಯೋಜನೆ. ಯಾವುದೇ ಯೋಜನೆ ಅನುಷ್ಠಾನಗೊಳ್ಳುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಅವುಗಳೆಲ್ಲವನ್ನು ನಿಭಾಯಿಸಿ ಯಶಸ್ವಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ. ಹಿಂದಿದ್ದ ಅಧ್ಯಕ್ಷರು ಯೋಜನೆಗೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದ್ದಾರೆ. ಆ ಕೆಲಸವನ್ನು ಮುಂದುವರೆಸಿಕೊಂಡುಹೋಗಲು ಅನುಭವಿ ರಾಜಕಾರಣಿಯಾದ ಎಲ್.ಚಂದ್ರಶೇಖರ್ ಸಮರ್ಥರಾಗಿರುವ ಕಾರಣದಿಂದಲೇ ಜಿಬಿಡಿಎ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿದ ನಿಷ್ಠಾವಂತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಆಶಯವಾಗಿದೆ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗ ಜಿಲ್ಲಾಧ್ಯಕ್ಷ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಗೆ ದುಡಿದವರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿದ್ದಾರೆ ಎಂದುಎಸ್.ರವಿ ಹೇಳಿದರು.
ನೂತನ ಅಧ್ಯಕ್ಷ ಎಲ್.ಚಂದ್ರಶೇಖರ್ ಅವರನ್ನು ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಕೆಪಿಟಿಸಿಎಲ್ ನಿರ್ದೇಶಕ ಬ್ಯಾಟಪ್ಪ, ಬಿಡಿದಿ ಸೊಸೈಟಿ ಅಧ್ಯಕ್ಷ ಮಧುಕುಮಾರ್, ವಾಜರಹಳ್ಳಿ ಮಹೇಶ್, ತಾಪಂ ಮಾಜಿ ಅಧ್ಯಕ್ಷ ಮಹದೇವಯ್ಯ, ಮಾಜಿ ಸದಸ್ಯ ಎಚ್.ಸಿ.ರಾಜಣ್ಣ ಹೊಸೂರು, ಬಿಡದಿ ಪುರಸಭೆ ಮಾಜಿ ಸದಸ್ಯ ಲೋಕೇಶ್, ಬೈರಮಂಗಲ ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ದರಾಜು, ಮುಖಂಡರಾದ ವಾಸು, ಉಮಾಶಂಕರ್ ಮತ್ತಿತರರು ಅಭಿನಂದಿಸಿದರು.16ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷ ಎಲ್.ಚಂದ್ರಶೇಖರ್ ಅವರನ್ನು ಶಾಸಕ ಇಕ್ಬಾಲ್ ಹುಸೇನ್ ಅಭಿನಂದಿಸಿದರು. ಎಂಎಲ್ಸಿ ರವಿ, ನಗರಸಭೆ ಮಾಜಿ ಅಧ್ಯಕ್ಷ ಶೇಷಾದ್ರಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಕೆಪಿಟಿಸಿಎಲ್ ನಿರ್ದೇಶಕ ಬ್ಯಾಟಪ್ಪ, ಬಿಡಿದಿ ಸೊಸೈಟಿ ಅಧ್ಯಕ್ಷ ಮಧುಕುಮಾರ್ ಇತರರಿದ್ದರು.