ರಾಜ್ಯದಲ್ಲೇ ಬೀದರ್‌ ಅಪರಾಧ ಪ್ರಮಾಣ ಕಮ್ಮಿಯಾಗಿದೆ: ಎಸ್‌ಪಿ

| Published : Jul 01 2024, 01:51 AM IST

ರಾಜ್ಯದಲ್ಲೇ ಬೀದರ್‌ ಅಪರಾಧ ಪ್ರಮಾಣ ಕಮ್ಮಿಯಾಗಿದೆ: ಎಸ್‌ಪಿ
Share this Article
  • FB
  • TW
  • Linkdin
  • Email

ಸಾರಾಂಶ

ಸೈಬರ್‌ ಕ್ರೈಂಗೆ ಅಕ್ಷರಸ್ಥರೇ ಹೆಚ್ಚು ಬಲಿ ಆಗ್ತಿದ್ದಾರೆ. ಜಿಲ್ಲೆಯಲ್ಲಿ ಶೇ.97ರಷ್ಟು ಫೈವ್‌ ಸ್ಟಾರ್‌ ಕ್ರಮಾಂಕದ ಪೊಲೀಸ್‌ ಠಾಣೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಡಕಾಯಿತಿ, ಸರಗಳ್ಳತನದ ಒಂದೂ ಪ್ರಕರಣ ದಾಖಲಾಗಿಲ್ಲ. ಇದು ಪೊಲೀಸರ ಕಾರ್ಯಕ್ಷಮತೆಗೆ ಹಿಡಿತ ಕನ್ನಡಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಜ್ಯದ್ದಷ್ಟೇ ಅಲ್ಲ ದೇಶದ ಸರಾಸರಿ ಅಪರಾಧಕ್ಕಿಂತ ಬೀದರ್‌ ಜಿಲ್ಲೆಯ ಅಪರಾಧ ಪ್ರಮಾಣ ಪ್ರಸಕ್ತ ವರ್ಷಗಳಲ್ಲಿ ಕಡಿಮೆಯಿದೆ ಇದಕ್ಕೆ ಪೊಲೀಸ್‌ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಶ್ರಮ ಹಾಗೂ ಸಾರ್ವಜನಿಕರ ಸಹಭಾಗಿತ್ವ ಕಾರಣವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌ ತಿಳಿಸಿದರು.

ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಪೊಲೀಸ್‌ ಇ-ಬುಲೆಟಿನ್‌ ಮಾಸಿಕ ಪತ್ರಿಕೆ ಬಿಡುಗಡೆ ಹಾಗೂ ಪೊಲೀಸರ ಪ್ರತಿಭಾನ್ವಿತ ಮಕ್ಕಳು ಮತ್ತು ಶಾಲಾ ಗುರುಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.97ರಷ್ಟು ಫೈವ್‌ ಸ್ಟಾರ್‌ ಕ್ರಮಾಂಕದ ಪೊಲೀಸ್‌ ಠಾಣೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಡಕಾಯಿತಿ, ಸರಗಳ್ಳತನದ ಒಂದೂ ಪ್ರಕರಣ ದಾಖಲಾಗಿಲ್ಲ. ಇದು ಪೊಲೀಸರ ಕಾರ್ಯಕ್ಷಮತೆಗೆ ಹಿಡಿತ ಕನ್ನಡಿಯಾಗಿದೆ ಎಂದರು.

ಪೊಲೀಸ್ ಇ-ಬುಲೆಟಿನ್‌ ಮಾಸಿಕವಾಗಿ ಹೊರತರಲು ನಿರ್ಧರಿಸಿದ್ದು, ಇದರಲ್ಲಿ ಪೊಲೀಸ್‌ ಇಲಾಖೆಯ ಕಾರ್ಯಗಳು, ಅಪರಾಧ ಪ್ರಕರಣಗಳ ಮಾಹಿತಿ, ಸಾರ್ವಜನಿಕರ ಸಹಭಾಗಿತ್ವಕ್ಕೆ ಇರುವ ಅವಕಾಶಗಳು ಮತ್ತು ಮಾಹಿತಿ ಪ್ರಕಟಿಸಲಾಗುತ್ತಿದೆ. ಇದನ್ನು ಜಿಲ್ಲೆಯ ಪ್ರತಿಯೊಂದು ಶಾಲಾ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳು ಮತ್ತು ಪಾಲಕರ ವರೆಗೆ ತಲುಪಿಸುವ ಕಾರ್ಯ ಮಾಡಬೇಕು. ಇದರಿಂದ ಪೊಲೀಸರಿಗೆ ಅಪರಾಧ ಮತ್ತು ಅಪರಾಧಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಜರಗುತ್ತಿರುವ ವಿವಿಧ ರೀತಿಯ ಅಪರಾಧಗಳು ವಿಶೇಷವಾಗಿ ಸೈಬರ್‌ ಕ್ರೈಂ ಮತ್ತು ಅಪಘಾತಗಳು ಹಾಗೂ ಇವುಗಳನ್ನು ತಡೆಗಟ್ಟಲು ನಾವು ಅನುಸರಿಸಬಹುದಾದ ಎಚ್ಚರಿಕೆಯ ಕ್ರಮಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿಯನ್ನ ಮತ್ತು ವಿಡಿಯೋ ಲಿಂಕ್‌ಗಳನ್ನು ಕೂಡ ನೀಡಲಾಗುತ್ತದೆ. ಇದರಿಂದಾಗಿ ಅಪರಾಧಗಳ ತಡೆಗಟ್ಟುವ ಜೊತೆಗೆ ಅಪರಾಧಗಳಿಗೆ ಬಲಿಪಶು ಆಗುವುದನ್ನು ಕೂಡ ತಡೆಗಟ್ಟಬಹುದಾಗಿದೆ. ಇದನ್ನು ಆಂಗ್ಲ, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ತರ್ಜುಮೆ ಮಾಡುವ ಪ್ರಯತ್ನ ಕೂಡ ಸಾಗಿದೆ ಎಂದರು.

ಸೈಬರ್‌ ಕ್ರೈಮ್‌ ಹೆಚ್ಚುತ್ತಿರುವುದು ಕಳವಳಕಾರಿ ಇದಕ್ಕೆ ಅನಕ್ಷಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿರುವ ಮೊಬೈಲ್‌ ಬಳಕೆಯ ಪ್ರವೃತ್ತಿ ಆತಂಕಕಾರಿ. ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳಲ್ಲಿ 107 ಸೈಬರ್‌ ಅಪರಾಧಗಳ ಪ್ರಕರಣಗಳು ದಾಖಲಾಗಿದ್ದು ವಿದ್ಯಾವಂತರೇ ಲಕ್ಷಾಂತರ ರುಪಾಯಿಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಸಾರ್ವಜನಿಕರು ಸೈಬರ್‌ ಅಪರಾಧಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಆಧಾರ್‌ ಪರವಾನಗಿ ಲಾಕ್‌ ಮಾಡಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.

ಇನ್ನು ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಕೊಲೆ ಪ್ರಕರಣಗಳಿಗಿಂತ 10ಪಟ್ಟು ಹೆಚ್ಚಿವೆ. ಜೂನ್‌ ತಿಂಗಳೊಂದರಲ್ಲಿಯೇ 20 ಜನ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ ಈ ಪೈಕಿ 15 ಜನ ಹೆಲ್ಮೆಟ್‌ ಧರಿಸದ ಕಾರಣ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಹೆಲ್ಮೆಟ್‌ ಧರಿಸುವ ಕುರಿತಂತೆ ಪೊಲೀಸರು ಸಾಕಷ್ಟು ಬಾರಿ ದಂಡ ಹಾಕಿ ಎಚ್ಚರಿಸುವ ಪ್ರಯತ್ನ ಮಾಡಿದರೂ ಬಹುತೇಕ ಜನ ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಿ ಪಾಲಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವಂತೆ ಮಾಡುವ ಪ್ರಯತ್ನವಾಗಬೇಕು. ಅಪ್ರಾಪ್ತರು ಬೈಕ್‌ ನಡೆಸದಂತೆ ಪಾಲಕರು ಎಚ್ಚರಿಕೆ ವಹಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಲಿ ಎಂದರು.

ಬೀದರ್‌ ಜಿಲ್ಲೆಯಲ್ಲಿ ಮನೆಗಳ್ಳತನದಂಥ ಪ್ರಕರಣಗಳನ್ನು ನಿಯಂತ್ರಿಸಲು ಸಿಸಿ ಕ್ಯಾಮೆರಾಗಳ ಅಳವಡಿಕೆ ಮತ್ತು ಅವುಗಳನ್ನು ಪೊಲೀಸ್‌ ಇಲಾಖೆಯೊಂದಿಗೆ ನೋಂದಣಿ ಮಾಡಿಕೊಂಡು ಸಹಕರಿಸುವತ್ತ ಮುಂದಾಗಲಿ ಎಂದು ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌ ಕರೆ ನೀಡಿದರು.

ಬೀದರ್‌ ಗ್ಲೋಬಲ್‌ ಸೈನಿಕ್‌ ಅಕಾಡೆಮಿಯ ಕರ್ನಲ್‌ ಶರಣಪ್ಪ. ರೋಟರಿ ಕ್ಲಬ್‌ನ ಡಾ. ರಘು ಕೃಷ್ಣ ಮೂರ್ತಿ ಹಾಗೂ ಜ್ಞಾನಸುಧಾ ವಿದ್ಯಾಯಲದ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್‌, ನಗರಸಭೆ ಅಧ್ಯಕ್ಷ ಮಹ್ಮದ್‌ ಗೌಸ್‌ ಮಾತನಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿ ಚನ್ನಬಸವಣ್ಣ ಎಸ್‌ಎಲ್‌ ಸಾರ್ವಜನಿಕರ ಸುರಕ್ಷತೆಯಷ್ಟೇ ಅಲ್ಲ ಅವರು ತಮ್ಮ ಪೊಲೀಸ್‌ ಸಿಬ್ಬಂದಿಯವರ ಕುಟುಂಬದ ಕಾಳಜಿ ವಹಿಸುತ್ತಿರುವುದು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.

ಎಎಸ್‌ಪಿ ಚಂದ್ರಕಾಂತ ಪೂಜಾರಿ, ಡಿಎಸ್‌ಪಿ ಶಿವನಗೌಡ ಪಾಟೀಲ್‌, ಜ್ಞಾನಸುಧಾ ವಿದ್ಯಾಲಯದ ಮುನೇಶ್ವರ ಲಾಖಾ, ಗುರುನಾನಕ ಶಿಕ್ಷಣ ಸಂಸ್ಥೆಯ ಪುನೀತ್‌ ಸಿಂಗ್‌, ಶಾಹೀನ್‌ ಶಿಕ್ಷಣ ಸಂಸ್ಥೆಯ ಅಬ್ದುಲ್‌ ಹನ್ನಾನ್‌, ಸಿಇಒ ತೌಸಿಫ್‌ ಮಡಿಕೇರಿ, ಪತ್ರಕರ್ತ ಅಪ್ಪಾರಾವ್‌ ಸೌದಿ, ಪಬ್ಲಿಕ್‌ ಪ್ರಾಸಿಕೂಟರ್‌ ನಾಗಪ್ಪ ಸಿ., ಡಿಡಿಪಿಐ ಸಲೀಂ ಪಾಶಾ ಹಾಗೂ ಡಿಡಿಪಿಯು ಚಂದ್ರಶೇಖರ ಉಪಸ್ಥಿತರಿದ್ದರು.