ಸಾರಾಂಶ
ಬೀದರ್: ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕೇಂದ್ರ ಸಚಿವ ಹಾಲಿ ಸಂಸದ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದು, ಕ್ಷೇತ್ರದಿಂದ ಕಾಂಗ್ರೆಸ್ ಸದ್ಯಕ್ಕಂತೂ ಮಾಜಿ ಸಚಿವ ರಾಜಶೇಖರ ಪಾಟೀಲ್ ಅಥವಾ ಹಾಲಿ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ ಖಂಡ್ರೆ ಟಿಕೆಟ್ ಗಿಟ್ಟಿಸಿಕೊಳ್ಳುವ ಫೇವರೇಟ್ ಆಗಿದ್ದು, ಬೀದರ್ ಲೋಕಸಭಾ ಕ್ಷೇತ್ರ ಎಂದಿನಂತೆ ನೇರ ಸ್ಪರ್ಧೆಗೆ ತಯಾರಾಗುವತ್ತ ಸಾಗಿದೆ.
ಲೋಕಸಭೆ ಚುನಾವಣೆಗಾಗಿ ಶನಿವಾರ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡುವ ಸಾಧ್ಯತೆಗಳಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಭಗವಂತ ಖೂಬಾ ಅವರಿದ್ದರೆ ಅವರ ಬೆನ್ನಿಗೆ ಜೆಡಿಎಸ್ ಬಲ ಈ ಬಾರಿ ಹೊಸದು. ಇನ್ನುಳಿದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಶನಿವಾರ ಹೊರಬೀಳುವ ಸಾಧ್ಯತೆಗಳಿವೆ.ಕಮಲ, ಕೈ ಪಾಳಯದಲ್ಲಿ ಇರುಸುಮುರುಸು: ಬೀದರ್ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಬಾರಿಸಲು ಭಗವಂತ ಖೂಬಾ ಕಣಕ್ಕೆ ಇಳಿದಿದ್ದಾರಾದರೂ ಕ್ಷೇತ್ರದಲ್ಲಿನ ಕಮಲ ಪಾಳಯದಲ್ಲಿನ ಭಾರಿ ವಿರೋಧ ಅವರನ್ನು ಇರುಸುಮುರಿಸಿಗೆ ನೂಕಿದರೂ ಅಚ್ಚರಿಯಿಲ್ಲ. ಹಾಗಂತ ಬಿಜೆಪಿಯಲ್ಲಿ ಖೂಬಾಗೆ ಭಾರಿ ವಿರೋಧದ ಸಮಸ್ಯೆ ಇದ್ದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಚೆನ್ನಾಗಿದೆ ಎಂದೇನಿಲ್ಲ.
ಸಾಗರ ಖಂಡ್ರೆಗಾಗಿ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸಿದ್ದ ಸಚಿವ ಈಶ್ವರ ಖಂಡ್ರೆ ಅವರ ಮನವಿಯನ್ನು ಲೆಕ್ಕಿಸದೇ ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರಿಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದು ಕ್ಷೇತ್ರದಲ್ಲಿ ಖಂಡ್ರೆ ಪಾಳಯದ ಪಕ್ಷ ಪ್ರಮುಖರ ಕಣ್ಣು ಕೆಂಪಾಗಿಸಲಿದೆ.ಕಳೆದ ಕೆಲ ವರ್ಷಗಳಿಂದ ಈಶ್ವರ ಖಂಡ್ರೆ ಅವರ ಪುತ್ರ ಸಾಗರ ಖಂಡ್ರೆ ಲೋಕಸಭಾ ಚುನಾವಣಾ ತಯಾರಿ ನಡೆಸಿದ್ದು, ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಹೆಸರು ಪ್ರಚಾರಕ್ಕೆ ಆದ್ಯತೆ, ಭೇಟಿಯಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಾಗಿರುವ ಇವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದೆಯಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೆಲುವಿನ ಶ್ರಮದ ಹೊಣೆ ಹೊರಬೇಕಾದ ಈಶ್ವರ ಖಂಡ್ರೆ ಅವರ ಮನವಿಯನ್ನು ಲೆಕ್ಕಿಸದೇ ಬೆಂಬಲಿಗರ ಮುನಿಸು ಸ್ವಪಕ್ಷ ಕಾಂಗ್ರೆಸ್‌ಗೆ ಪೆಟ್ಟು ನೀಡುವ ಸಾಧ್ಯತೆಗಳಂತೂ ಖಂಡಿತ ಇವೆ.
ಇತರ ಪಕ್ಷಗಳ ಬಲಾಬಲ ಆಟಕ್ಕುಂಟು ಲೆಕ್ಕಕ್ಕಿಲ್ಲ:ಹೀಗಾಗಿ ಖೂಬಾಗೆ ಟಿಕೆಟ್ ಕಮಲ ಪಾಳಯದಲ್ಲಿ ಬಿರುಕು ಮೂಡಿಸಿದರೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ ಪಾಟೀಲ್ ಹಾಗೂ ಖಂಡ್ರೆ ಬೆಂಬಲಿಗರ ಮಧ್ಯದಲ್ಲಿ ವಿರಸ ಮೂಡಿಸುವದರಲ್ಲಿ ಸಂದೇಹವಿಲ್ಲ.
ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಕೂಡ ಇನ್ನು ಚುನಾವಣೆ ಎದುರಿಸುವಂತಹ ಸ್ಥಿತಿಯಲ್ಲಿ ಇಲ್ಲ ಎಂದು ಖುದ್ದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರೇ ಹೇಳಿದ್ದಾರೆ. ಸಾಧ್ಯವಾದರೆ ಅಥವಾ ಸಮಯ ಬಂದರೆ ಯಾವುದೇ ಪಕ್ಷಕ್ಕೆ ತಾವು ಬೆಂಬಲಿಸಬಹುದು ಎಂದೂ ಹೇಳಿದೆ. ಇನ್ನು ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಕೂಡ ಬೀದರ್ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಶಕ್ತಿಶಾಲಿಯಾಗಿ ಬೆಳೆದಿಲ್ಲ. ಉಳಿದಂತೆ ಎಲ್ಲದರ ಬಗ್ಗೆ ಕಣ್ಣಾಡಿಸಿದಾಗ ಬೀದರ್ ಕ್ಷೇತ್ರವು ನೇರ ಹಣಾಹಣಿಯ ಕ್ಷೇತ್ರವಾಗಿ ಮಾರ್ಪಟ್ಟರೂ ಅಶ್ಚರ್ಯ ಇಲ್ಲ ಎಂದು ಹೇಳಬಹುದು. ಅಷ್ಟಕ್ಕೂ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆ ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.