ಶಾಸಕ ಶರಣು ಸಲಗರ, ಅವರ ವಾಹನ ಚಾಲಕ ಮಂಜು, ಬೆಂಬಲಿಗರಾದ ಕೃಷ್ಣಾ ಗೋಣೆ ಹಾಗೂ ಸಾಗರ್‌ ಲಾಡೆ ಸೇರಿ 7 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಸವಕಲ್ಯಾಣ(ಬೀದರ್‌): ಅಕ್ರಮ ಗೋಸಾಗಣೆ ಮಾಡಿ ಗೋಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಮುಸ್ಲಿಮರಿಗೆ ಬೆದರಿಕೆ ಹಾಕಿದ ಆರೋಪದಡಿ ಶಾಸಕ ಶರಣು ಸಲಗರ, ಅವರ ವಾಹನ ಚಾಲಕ ಮಂಜು, ಬೆಂಬಲಿಗರಾದ ಕೃಷ್ಣಾ ಗೋಣೆ ಹಾಗೂ ಸಾಗರ್‌ ಲಾಡೆ ಸೇರಿ 7 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಶುಕ್ರವಾರ ಬೆಳಗ್ಗೆ ಶಾಸಕ ಶರಣು ಸಲಗರ ಅವರು ನಗರದ ಮೆಹಬೂಬ್‌ನಗರ ಬಡಾವಣೆಯಲ್ಲಿ 25ಕ್ಕೂ ಹೆಚ್ಚು ದನ ಕರುಗಳನ್ನು ಅಕ್ರಮವಾಗಿ ಕಟ್ಟಿ ಹಾಕಿರುವುದನ್ನು ಪತ್ತೆ ಹಚ್ಚಿದ್ದವು. ಅಲ್ಲದೆ ಅವುಗಳನ್ನು ಗೋಶಾಲೆಗೆ ರವಾನಿಸುವಂತೆ ಒತ್ತಾಯಿಸಿ ಯಶಸ್ವಿಯಾಗಿದ್ದರು. 

ಈ ವೇಳೆ ಅವರು ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಮತ್ತು ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಅವರ ಮನೆಯಂಗಳಕ್ಕೆ ತೆರಳಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರ ಬೆಂಬಲಿಗರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ.