ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಟೆಂಪೋ ಉರುಳಿ ಬಿದ್ದು ಮಾಂಸ ರಸ್ತೆಯಲ್ಲಿ ಚೆಲ್ಲಾಡಿರುವ ಘಟನೆ ತಾಲೂಕಿನ ನಿಡಘಟ್ಟ ಸಮೀಪದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ.ಘಟನೆಯಲ್ಲಿ ಟೆಂಪೋ ಚಾಲಕ ಸೇರಿದಂತೆ ಹಲವರು ಗಾಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಮಂಡ್ಯ - ಮದ್ದೂರಿನ ಹಲವು ನಿಗೂಢ ಸ್ಥಳಗಳಲ್ಲಿ ಗೋವುಗಳನ್ನು ವಧೆ ಮಾಡಿದ ನಂತರ ಬೊಲೆರೋ ಟೆಂಪೋದಲ್ಲಿ ಗೋಮಾಂಸವನ್ನು ಬೆಂಗಳೂರಿಗೆ ಸಾಗಾಣಿಕೆ ಮಾಡಲಾಗುತ್ತಿತ್ತು.
ನಿಡಘಟ್ಟ ಸಮೀಪದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಈ ವೇಳೆ ಟೆಂಪೋದಲ್ಲಿದ್ದ ಗೋಮಾಂಸ ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಬಿದ್ದಿದೆ. ಟೆಂಪೋದಲ್ಲಿದ್ದ ಚಾಲಕ ಸೇರಿ ಹಲವರು ಗಾಯಗೊಂಡಿದ್ದಾರೆ.ಸಾರ್ವಜನಿಕರು ಹಾಗೂ ಪೊಲೀಸರಿಗೆ ಸಿಕ್ಕಿ ಬೀಳುವ ಭೀತಿಯಿಂದ ಟೆಂಪೋ ಹಾಗೂ ಗೋಮಾಂಸವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಕೆಳಕ್ಕೆ ಧಾವಿಸಿದ ಹಿಂದೂ ಜಾಗರಣ ವೇದಿಕೆ ರಾಜ್ಯ ಪ್ರಮುಖ ಕದಲೂರು ಯೋಗಾನಂದ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ನಂತರ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಉರುಳಿ ಬಿದ್ದಿದ್ದ ಟೆಂಪೋವನ್ನು ರಸ್ತೆ ಬದಿಗೆ ಸೇರಿಸಿ ಹೆದ್ದಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಟೆಂಪೋ ಹಾಗೂ ಮಾಂಸವನ್ನು ವಶಕ್ಕೆತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅಪಘಾತ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕದಲೂರು ಯೋಗಾನಂದ, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಜಿಲ್ಲೆಯಲ್ಲಿ ಗೋ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲೂ ಮದ್ದೂರಿನ ಅಲ್ಪಸಂಖ್ಯಾತರ ಬಡಾವಣೆಗಳಲ್ಲಿ ಗೋ ಸಾಗಾಣಿಕೆ ಮತ್ತು ಗೋ ಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಪೊಲೀಸರು ಈ ದಂಧೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಗೋಮಾಂಸ ರಾತ್ರಿ ವೇಳೆ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಗೋಮಾಂಸ ಸಾಗಾಣಿಕೆಯನ್ನು ತಡೆಗಟ್ಟಬೇಕು. ವಾಹನಗಳನ್ನು ಮುಟ್ಟು ಗೋಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ವೇದಿಕೆ ಗೋ ಹತ್ಯೆ ನಡೆಯುವ ಸ್ಥಳದ ಮೇಲೆ ದಾಳಿ ನಡೆಸಬೇಕಾಗುತ್ತದೆ ಎಂದು ಎಚ್ಚಸಿದರು.