ಸಾರಾಂಶ
ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಗುಜರಾತ್, ಮಹಾರಾಷ್ಟ್ರಕ್ಕಿಂತಲೂ ಕರ್ನಾಟಕದಲ್ಲಿ ಅತಿಹೆಚ್ಚು ಜಿಎಸ್ ಟಿ ಸಂಗ್ರಹವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಮಹಾದ್ರೋಹ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಒಂದು ಸತ್ಯದ ಸುತ್ತ ಎಂಬ ಶೀರ್ಷಿಕೆಯಡಿಯಲ್ಲಿ ಶ್ವೇತಪತ್ರ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನೀತಿಗಳಿಂದಾಗಿ ಕರ್ನಾಟಕ ಸಾಲಗಾರ ರಾಜ್ಯವಾಗುತ್ತಿದೆ.
ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಗಮನಾರ್ಹ ಸಾಧನೆ ಮಾಡಿದೆ. ಗುಜರಾತ್, ಮಹಾರಾಷ್ಟ್ರಕ್ಕಿಂತಲೂ ಕರ್ನಾಟಕದಲ್ಲಿ ಅತಿಹೆಚ್ಚು ಜಿಎಸ್ ಟಿ ಸಂಗ್ರಹವಾಗುತ್ತಿದೆ ಎಂದರು.
ಅಂದಾಜು 1.40 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ. ಆದರೆ, ಕರ್ನಾಟಕಕ್ಕೆ ಜಿಎಸ್ ಟಿಯಲ್ಲಿ ಶೇ.52 ರಷ್ಟು ಪಾಲು ಮಾತ್ರ ಸಿಗುತ್ತಿದೆ. ಒಟ್ಟಾರೆಯಾಗಿ ಎಲ್ಲಾ ಮೂಲಗಳಿಂದ ಈ ವರ್ಷ ಕರ್ನಾಟಕದಿಂದ ಸುಮಾರು 4 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು, ತೆರಿಗೆ, ಸೆಸ್, ಸುಂಕ ಮುಂತಾದವುಗಳ ರೂಪದಲ್ಲಿ ಕೇಂದ್ರ ಸಂಗ್ರಹಿಸುತ್ತಿದೆ.
ಆದರೆ, ಕರ್ನಾಟಕಕ್ಕೆ ಕೇವಲ 50-53 ಸಾವಿರ ಕೋಟಿ ಮಾತ್ರ ವಾಪಸ್ ನೀಡುತ್ತಿದೆ. ಇದಕ್ಕಿಂತ ಅನ್ಯಾಯ ಬೇರೆ ಯಾವುದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ಸಂಪನ್ಮೂಲ ಹರಿದು ಹೋಗುತ್ತಿದೆ. ಆದರೆ, ಕರ್ನಾಟಕಕ್ಕೆ ಕೇಂದ್ರದಿಂದ ಕಡಿಮೆ ಅನುದಾನ ಬರುತ್ತಿದೆ. ರಾಜ್ಯಕ್ಕೆ ಕೇಂದ್ರದಿಂದ ಬರುತ್ತಿರುವ ತೆರಿಗೆ ಪಾಲು ಹಾಗೂ ಇನ್ನಿತರೆ ಅನುದಾನಗಳು ಹೆಚ್ಚಾಗುವ ಬದಲು ಕಡಿಮೆಯಾಗುತ್ತಿವೆ.
ರಾಜ್ಯದ ಬಜೆಟ್ ಗಾತ್ರಕ್ಕೆ ತಕ್ಕಂತೆ ಕೇಂದ್ರದಿಂದ ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ. ತೆರಿಗೆ ಪಾಲು ಸಿಗಬೇಕು ಎಂದರು. ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಅನಾವಶ್ಯಕ ಅರೋಪಗಳನ್ನು ಮಾಡುತ್ತಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಾರೆ.
ರಾಜ್ಯದಲ್ಲಿ ಉಂಟಾಗಿರುವ ಬರದಿಂದ 35000 ಕೋಟಿ ನಷ್ಟ ಆಗಿದೆ ಎಂದು ಕೇಂದ್ರ ಸಮಿತಿಯೇ ವರದಿ ಮಾಡಿದೆ. ಆದರೂ ಕೇಂದ್ರದಿಂದ ಬಿಡಿಗಾಸು ಅನುದಾನ ಬಂದಿಲ್ಲ. ಬಿಜೆಪಿ ನಾಯಕರು ಈ ವಿಚಾರ ಪ್ರಶ್ನೆ ಮಾಡೋದು ಬಿಟ್ಟು, ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಅವರು ಕಿಡಿಕಾರಿದರು.
ಇಡಿ ದೇಶದಲ್ಲೇ ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ ಸರ್ಕಾರ ಎಂದರೇ ಕಾಂಗ್ರೆಸ್ ಸರ್ಕಾರ ಎಂದು ಎದೆಯುಬ್ಬಿಸಿ ಹೇಳುತ್ತೇವೆ.
ಇದನ್ನು ಸಹಿಸದೇ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕ ಯತ್ನಾಳ್ ಅವರೇ ತಮ್ಮ ಸರ್ಕಾರದ ವಿರುದ್ಧವೇ 47 ಪುಟಗಳ ಕಂಪ್ಲೇಂಟ್ ಮಾಡಿದ್ದಾರೆ, ಇದರ ತನಿಖೆ ಕೈಗೊಂಡರೆ ಹಲವು ಮಂದಿ ನಾಯಕರು ಜೈಲಿಗೆ ಹೋಗುತ್ತಾರೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ಒಂದಂಕಿಯನ್ನು ದಾಟುವುದಿಲ್ಲ. 28ಕ್ಕೆ 28 ಗೆಲ್ಲುತ್ತೇವೆ ಎಂದು ಕನಸು ಕಾಣ್ತಾ ಇದ್ದಾರೆ. ಅವರು 8 ಸೀಟು ಗೆಲ್ಲಲಿ ಸಾಕು. ನಾವು 20 ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್, ಮುಖಂಡರಾದ ಕೆ. ಮಹೇಶ್, ಗಿರೀಶ್ ಮೊದಲಾದವರು ಇದ್ದರು.
ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಜೊತೆಗೆ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಬಿಜೆಪಿ ಹೊಸ ಹೊಸ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಭಾವನೆ ಕೆಡಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆಗಳನ್ನು ಹೇಳಿದರೆ ಮತದಾರರು ಬೆಂಬಲಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))