ಚನ್ನಪಟ್ಟಣ: ನಂದಿನಿ ಉತ್ಪನ್ನ ಮಾರುಕಟ್ಟೆ ವಿಸ್ತರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವಾರು ಪೈಪೋಟಿ ನಡುವೆ ಇಂದು ಬಮೂಲ್ ಸಾಕಷ್ಟು ಪ್ರಗತಿ ಸಾಧಿಸಿದ್ದು, ಇನ್ನೊಂದು ವರ್ಷದಲ್ಲಿ ಒಕ್ಕೂಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಲಿದ್ದೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಭೂಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಎನ್‌ಪಿಡಿಡಿ ಯೋಜನೆಯಡಿ ನಿರ್ಮಾಣವಾಗಿರುವ ೫೦೦೦ ಲೀಟರ್ ಸಾಮರ್ಥ್ಯದ ಬಿ.ಎಂ.ಸಿ. ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ನಾನು ಬಮೂಲ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಒಕ್ಕೂಟ ಸುಮಾರು ೧೪.೫ ಕೋಟಿ ನಷ್ಟದಲ್ಲಿತ್ತು, ಆನಂತರ ಅದು ಸುಮಾರು ೫೦ಕೋಟಿಗೆ ಬೆಳೆಯಿತು. ಆಗ ಹಾಲು ಉತ್ಪತ್ತಿ ಜಾಸ್ತಿಯಾಗುತ್ತಿದ್ದು, ಮಾರಾಟ ಮಾಡಲು ಆಗುತ್ತಿರಲಿಲ್ಲ. ಹಾಲಿನ ದರ ಕಡಿಮೆ ಮಾಡಬೇಕಿತ್ತು, ಇಲ್ಲ ಮಾರುಕಟ್ಟೆ ವಿಸ್ತರಿಸುವ ಸವಾಲು ನಮ್ಮ ಮುಂದೆ ಇತ್ತು. ಆ ಸವಾಲು ಎದುರಿಸಿ ಇಂದು ಒಕ್ಕೂಟ ಒಂದು ಉತ್ತಮ ಸ್ಥಿತಿಗೆ ಬಂದಿದೆ. ಜನವರಿ ಆಡಿಟ್‌ನಲ್ಲಿ ಈ ವರ್ಷದಲ್ಲಿ ೨೦ ಕೋಟಿ ಲಾಭ ಗಳಿಸಿದೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಚನ್ನಪಟ್ಟಣದಲ್ಲಿ ಅತಿಹೆಚ್ಚು ಹಾಲು ಶೇಖರಣೆಯಾಗುತ್ತಿದ್ದು, ಎರಡನೇ ಸ್ಥಾನದಲ್ಲಿದೆ. ಪ್ರತಿದಿನ ೩ಲಕ್ಷ ಲೀ.ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಇದನ್ನು ನಾಲ್ಕು ಲಕ್ಷ ಲಿ.ಗೇ ಹೆಚ್ಚಿಸಬೇಕು. ಮುಂದಿನ ವರ್ಷದಿಂದ ಬೇಸಿಗೆಯಲ್ಲಿ ಸಹ ಹಸಿ ಮೇವು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಹೈನುಗಾರಿಕೆಯಲ್ಲಿ ೮-೧೦ ಹಸು ಸಾಕಿದರೆ ಇಂಜಿನಿಯರ್‌ಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು. ಬಿಡಿಸಿಸಿ ಬ್ಯಾಂಕ್‌ನಿಂದ ಎರಡು ಹಸು ಖರೀದಿಸಲು ೧.೮೦ ಲಕ್ಷ ಸಾಲ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ. ೨ಎಕರೆ ಜಮೀನು ಇದ್ದರೆ ಮಿನಿ ಡೇರಿ ಮಾಡಲು ೧೫ ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ವಿವರಿಸಿದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಸುರೇಶ್ ಬಮೂಲ್ ಅಧ್ಯಕ್ಷರಾದ ನಂತರ ಒಕ್ಕೂಟಕ್ಕೆ ಒಂದು ಹೊಸ ಶಕ್ತಿ, ಚೈತನ್ಯ ನೀಡಿದ್ದಾರೆ. ಕ್ಷೀರೋದ್ಯಮದಲ್ಲಿ ಇರುವ ಎಡರುತೊಡರು ನಿವಾರಿಸಿ ರೈತರ ಶ್ರಮಕ್ಕೆ ತಕ್ಕ ಬೆಲೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಹಲವಾರು ಕ್ರಮ ತೆಗೆದುಕೊಂಡು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಹಳ ಕ್ರಿಯಾಶೀಲರಾಗಿ ಓಡಾಡುತ್ತಿದ್ದಾರೆ. ಲಿಂಗೇಶ್ ಸಹ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಇಬ್ಬರು ಸೇರಿ ರೈತರಿಗೆ ಅನುಕೂಲ ಕಲ್ಪಿಸಲಿ ಎಂದು ಹೇಳಿದರು.
ಇದೇ ವೇಳೆ ಬಾಣಗನಹಳ್ಳಿ, ನಿಡಗೋಡಿ, ಬೊಮ್ಮನಾಯಕನಹಳ್ಳಿ, ಗುಡ್ಡೆ ತಿಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಎನ್.ಪಿ.ಡಿ.ಡಿ. ಯೋಜನೆಯಡಿ ನಿರ್ಮಾಣವಾಗಿರುವ ೫೦೦೦ ಲೀಟರ್ ಸಾಮರ್ಥ್ಯದ ಬಿ.ಎಂ.ಸಿ. ಕೇಂದ್ರ ಉದ್ಘಾಟಿಸಲಾಯಿತು.
ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ವಾಸೀಲ್ ಅಲಿಖಾನ್, ಬಮೂಲ್ ಅಧಿಕಾರಿಗಳು ಇದ್ದರು.-------------
೨೪ಸಿಪಿಟಿ೧ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಎನ್‌ಪಿಡಿಡಿ ಯೋಜನೆಯಡಿ ನಿರ್ಮಾಣವಾಗಿರುವ ೫೦೦೦ ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರವನ್ನು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ಶಾಸಕ ಯೋಗೇಶ್ವರ್ ಉದ್ಘಾಟಿಸಿದರು.