ಸಾರಾಂಶ
ವಿರಾಸತ್ ಎರಡನೇ ದಿನ 1500 ಸ್ಕೌಟ್ಸ್ ಗೈಡ್ಸ್ ಪರೀಕ್ಷಾರ್ಥಿಗಳು ಬೃಹತ್ ಸ್ವಚ್ಛತಾ ಕಾರ್ಯ ಕೈಗೊಂಡರು.
ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಮೂವತ್ತನೇ ವರ್ಷದ ಆಳ್ವಾಸ್ ವಿರಾಸತ್ 2024 ರ ಎರಡನೇ ದಿನ 1500 ಸ್ಕೌಟ್ಸ್-ಗೈಡ್ಸ್ ಪರೀಕ್ಷಾರ್ಥಿಗಳು ಬೃಹತ್ ಸ್ವಚ್ಛತಾ ಕಾರ್ಯ ಕೈಗೊಂಡರು.ರಾಜ್ಯ ಮಟ್ಟದ ಒಟ್ಟು ಸ್ಕೌಟ್ಸ್-ಗೈಡ್ಸ್ ನ 33 ಜಿಲ್ಲೆಗಳ ಒಟ್ಟು 1500 ವಿದ್ಯಾರ್ಥಿಗಳು ಭಾಗವಹಿಸಿದ್ದು ಮೂಡುಬಿದಿರೆಯ ಮುಖ್ಯ ಪೇಟೆ, ಕಾಲೇಜು ರಸ್ತೆ, ವಿವೇಕಾನಗರ, ಆಳ್ವಾಸ್ ಕಾಲೇಜು ಸುತ್ತ ಮುತ್ತಲಿನ ರಸ್ತೆಗಳು, ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಲ್ಲಮುಂಡ್ಕೂರು ರಸ್ತೆ, ಪುತ್ತಿಗೆ ಇಕ್ಕೆಲಗಳಲ್ಲಿ ಪುರಸಭೆ ಸಹಯೋಗದೊಂದಿಗೆ ಸ್ವಚ್ಛತೆ ನಡೆಸಲಾಯಿತು.
ಕಸವನ್ನು ಹಾಗೂ ಪ್ಲಾಸ್ಟಿಕ್ ಗಳನ್ನು ಪ್ರತ್ಯೇಕಿಸಿ ಪುರಸಭೆಯ ವಾಹನಕ್ಕೆ ವಿದ್ಯಾರ್ಥಿಗಳು ನೀಡಿದರು.ಸೆಲ್ಫಿಗೆ ಮಾರು ಹೋದ ಯುವಜನತೆ:
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಿಧನದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಜೆ ಸಾರಿದ್ದ ಕಾರಣ ಮೂವತ್ತನೇ ವರ್ಷದ ವಿರಾಸತ್ ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತ್ತು. ಸೆಲ್ಫಿ ಸ್ಪಾಟ್ ಗಳಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟ ಸನ್ನಿವೇಶಗಳು ಕಂಡು ಬಂದವು .ಕಾಲೇಜು ವಿದ್ಯಾರ್ಥಿಗಳು, ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಕಲ್ಲಡ್ಕ ಬೊಂಬೆಗಳ, ಕೃಷಿ ಮೇಳದ ತರಕಾರಿಗಳ ಜೊತೆ ಸೆಲ್ಫಿಗೆ ಜೋತು ಬೀಳುತ್ತಿದ್ದರು.ಕೃಷಿ ಕಾಯಲು ಬೆದರು ಗೊಂಬೆ: ಹಳ್ಳಿಯ ಸೊಗಡಿನ ಕೃಷಿ ಕಾಯಲು ಬೆದರುಬೊಂಬೆಗಳು ಕಂಡು ಬಂದಿದ್ದು ವಿಶೇಷವಾಗಿತ್ತು . ಬತ್ತದ ಹುಲ್ಲಿನಿಂದ ಮಾಡಿದ ನೂರಕ್ಕೂ ಹೆಚ್ಚು ಬೆದರು ಬೊಂಬೆಗಳು ಪ್ರೇಕ್ಷಕರ ಮನಸೆಳೆಯುತ್ತಿವೆ. ಹಳ್ಳಿಗಳಲ್ಲಿ ರೈತರು ಕೃಷಿಯನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಿಸಲು ಮಾನವ ರೂಪದ ಬೆದರುಬೊಂಬೆಗಳನ್ನು ನಿಲ್ಲಿಸಿ ಕೃಷಿಯನ್ನು ಕಾಪಾಡುತ್ತಾರೆ. ಅದೇ ಕಲ್ಪನೆಯನ್ನು ಈ ವಿರಾಸತ್ ನಲ್ಲು ಅಳವಡಿಸಿಕೊಳ್ಳಲಾಗಿದೆ.
ರಾಜಸ್ಥಾನದ ರಾವಣನ (ತಟ್ಟಿರಾಯ) ಅನಾವರಣ: ವಿದ್ಯಾಗಿರಿಯ ಸುತ್ತ ಮುತ್ತಲು ಸುಮಾರು ನೂರು ಬಿದಿರಿನಿಂದ ರಾವಣನ ಮೂರ್ತಿಗಳನ್ನು ರಚಿಸಲಾಗಿದೆ. ರಾಜಸ್ಥಾನದ ಜೈಪುರದಿಂದ ಬಾಬು ಅವರ 8 ಜನರ ತಂಡ ಆಗಮಿಸಿ ಸುಮಾರು 70 ಹೊಸ ರಾವಣನ ಬಿದಿರಿನಮೂರ್ತಿಗಳನ್ನು ನಿರ್ಮಿಸಿದ್ದಾರೆ. ಕಳೆದ 2023 ರ ಆಳ್ವಾಸ್ ವಿರಾಸತ್ ನಲ್ಲಿ 30 ರಾವಣನ ಗೊಂಬೆಗಳನ್ನು ನಿರ್ಮಾಣ ಮಾಡಲಾಗಿದ್ದು ಈ ಭಾರಿ ಆಗಸ್ಟ್ ತಿಂಗಳಿನಿಂದ ಮೂರುತಿಂಗಳ ಕಾಲ ಉಳಿದ 70 ಗೊಂಬೆಗಳನ್ನು ನಿರ್ಮಿಸಲಾಗಿದೆ. ಈ ರಾವಣನ ಗೊಂಬೆಗಳಿಗೆ ತುಳುವಿನಲ್ಲಿ ತಟ್ಟಿರಾಯ ಎಂದು ಕರೆಯುವುದು ವಾಡಿಕೆ.