ಸಾರಾಂಶ
ತಿರುಪತಿ ಮಾದರಿ ಅಧ್ಯಯನ ಮಾಡಿ. ಅದೇ ಮಾದರಿಯಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸವದತ್ತಿ : ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನವನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡುವ ಸಲುವಾಗಿ ಯಲ್ಲಮ್ಮಾ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಪ್ರಾಧಿಕಾರ ಸೇರಿದಂತೆ 2 ಪ್ರಾಧಿಕಾರ ರಚನೆ ಮಾಡದ್ಗಿದ್ದು, ಬರುವ ವರ್ಷದೊಳಗೆ ದೇವಸ್ಥಾನ ಆವರಣದಲ್ಲಿ ಮೂರು ಸಾವಿರ ಜನರು ಕುಳಿತುಕೊಳ್ಳುವಂತಹ ದಾಸೋಹ ಕೇಂದ್ರ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯಿಂದ ₹೩೧ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಒಂದುವರೆ ಕೋಟಿಗಿಂತಲೂ ಅಧಿಕ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡಲಾಗುವುದು. ಕ್ಷೇತ್ರದಲ್ಲಿ ೧೦೮೭ ಎಕರೆ ಜಾಗ ಇದ್ದರೂ ಇಲ್ಲಿಯವರೆಗೆ ಮೂಲಸೌಕರ್ಯ ಅಭಿವೃದ್ಧಿ ಆಗಿಲ್ಲ. ಈಗ ಎಲ್ಲ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಒಳ್ಳೆಯ ಉದ್ದೇಶದಿಂದ ಕಟ್ಟಿರುವ ವಾಣಿಜ್ಯ ಮಳಿಗೆಗಳನ್ನು ಕಾನೂನು ಬಾಹಿರವಾಗಿ ಮಾಡಿಕೊಳ್ಳಬೇಡಿ. ಇದರಿಂದ ಈ ಕ್ಷೇತ್ರವೇ ಕಾನೂನು ಬಾಹಿರ ಆಗುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಸ ಜಾರಕಿಹೊಳಿ ಮಾತನಾಡಿ, ಬಹುದಿನಗಳ ಕನಸು ಇಂದು ಯಲ್ಲಮ್ಮ ದೇವಸ್ಥಾನದಲ್ಲಿ ಈಡೇರೋದು ಖುಷಿಯ ವಿಚಾರ. ಅಧಿಕಾರಿಗಳ ಸಭೆ ನಡೆಸಿ ಮೂಲ ಸೌಕರ್ಯ, ಉಳಿದುಕೊಳ್ಳುವ ವ್ಯವಸ್ಥೆ, ಯುಜಿಡಿ, ಬೈಪಾಸ್ ರಸ್ತೆ, ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಸ್ವತಂತ್ರ್ಯ ಸಿಕ್ಕು ೭೫ ವರ್ಷ ಕಳೆದರೂ ಇಲ್ಲಿ ಕನಿಷ್ಠ ಸೌಲಭ್ಯ ಕೊಡಲು ಆಗಿರಲಿಲ್ಲ. ಸಿಎಂ ಈಗ ಎರಡು ಪ್ರಾಧಿಕಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಇಂದು ಬಹಳ ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಹರ್ಷ ಶುಗರ್ಸ್ ನವರು ೨೦೦ ಕೊಠಡಿ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಕೆಎಸ್‌ಬಿಸಿಜೆಎಆರ್ 100 ಕೊಠಡಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಲೋಕೊಪಯೋಗಿ ಇಲಾಖೆಯಿಂದ ೧೦೦ ಕೊಠಡಿ ಮಾಡಿಕೊಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕ್ಷೇತ್ರ ಯಾವ ಮಟ್ಟಕ್ಕೆ ಅಭಿವೃದ್ಧಿ ಆಗಬೇಕಿತ್ತೊ ಆ ಮಟ್ಟಕ್ಕೆ ಅಭಿವೃದ್ಧಿ ಆಗಿಲ್ಲ ಎಂಬ ಚಿಂತೆ ನಮಗೂ ಇದೆ. ಇಂದು ಪ್ರಾಧಿಕಾರದ ಮೊದಲ ಸಭೆ ಸಿಎಂ ನೇತೃತ್ವದಲ್ಲಿ ನಡೆದಿದ್ದು, ಹಂತ ಹಂತವಾಗಿ ಅಭಿವೃದ್ಧಿ ಮಾಡಲು ಸಿಎಂ ಉತ್ಸುಕರಾಗಿದ್ದಾರೆ. ₹೧೦ ಕೋಟಿ ವೆಚ್ಚದಲ್ಲಿ ೪೮ಕ್ಕೂ ಹೆಚ್ಚು ದೇವದಾಸಿ ಮಕ್ಕಳಿಗೆ ಮಳಿಗೆಗಳನ್ನು ಕೊಡುವ ಕೆಲಸ ಮಾಡಲಾಗಿದೆ ಎಂದರು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಭರಮಗೌಡ ಕಾಗೆ, ಬಾಬಾಸಾಹೇಬ ಪಾಟೀಲ, ಎನ್.ಎಚ್. ಕೋನರಡ್ಡಿ, ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಲಕ್ಷ್ಮಣ ಚಿಂಗಳೆ ಇತರರು ಇದ್ದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಸ್ವಾಗತಿಸಿದರು. ಶಿವಾನಂದ ತಾರೀಹಾಳ ವಂದಿಸಿದರು.
ಮುಜರಾಯಿ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ: ಪ್ರಯತ್ನಗಳು ವಿಫಲ ಆಗಬಹುದು. ಆದರೆ ಪ್ರಾರ್ಥನೆ ವಿಫಲ ಆಗೋಕೆ ಸಾಧ್ಯವಿಲ್ಲ. ಎಲ್ಲರ ದುಃಖ ದೂರ ಮಾಡಲು ನಿಮ್ಮೆಲ್ಲರ ಪರವಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಈ ಕ್ಷೇತ್ರ ಅಭಿವೃದ್ಧಿ ಮಾಡಬೇಕೆಂದು ದಿಟ್ಟ ಪಣ ತೊಟ್ಟಿದ್ದೇವೆ. ಮುಜರಾಯಿ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲಿದ್ದೇವೆ. ಪ್ರಾಧಿಕಾರ ಮಾಡಿ ಎಂದು ಯಾರೂ ಕೇಳಿರಲಿಲ್ಲ. ಇದಕ್ಕೆ ಒಂದು ಸ್ವರೂಪ ಕೊಡಬೇಕು ಎಂದು ನಿರ್ಧರಿಸಿದ್ದೇವೆ. ಈ ಕ್ಷೇತ್ರ ಧಾರ್ಮಿಕತೆ ಜೊತೆಗೆ ಪ್ರವಾಸ ಕೇಂದ್ರ ಆಗಬೇಕಿದೆ. ಬಿಜೆಪಿಯವರು ದೇವರು ಮತ್ತು ಧರ್ಮ ಅವರ ಆಸ್ತಿ ಅಂದುಕೊಂಡಿದ್ದಾರೆ. ಅವರು ಧರ್ಮದಲ್ಲಿ ರಾಜಕಾರಣ ಮಾಡೋಕೆ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮ ಯಾರೊಬ್ಬನ ಸ್ವತ್ತಲ್ಲ ದೇವನೊಬ್ಬ ನಾಮ ಹಲವು. ಧರ್ಮ ಪಾಲನೆ ವೈಯಕ್ತಿಕ ವಿಚಾರವಾಗಿದೆ ಎಂದು ಹೇಳಿದರು.
ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ
ತಿರುಪತಿ ಮಾದರಿ ಅಧ್ಯಯನ ಮಾಡಿ. ಅದೇ ಮಾದರಿಯಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸವದತ್ತಿಯಲ್ಲಿ ಭಾನುವಾರ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು. ₹45 ಕೋಟಿ ಬ್ಯಾಂಕಿನಲ್ಲಿದ್ದು, ವಾರ್ಷಿಕ ಅಂದಾಜು ₹5 ಕೋಟಿ ಆದಾಯ ಬರುತ್ತಿದೆ.
ಉತ್ತಮ ಸೌಲಭ್ಯ ಒದಗಿಸುವ ಮೂಲಕ ಭಕ್ತರ ಭೇಟಿಯ ಪ್ರಮಾಣ ಹೆಚ್ಚಿಸಬೇಕು. ಸುಕ್ಷೇತ್ರಗಳಿಗೆ ಭೇಟಿ ನೀಡುವವರು ಬಡವರೇ ಆಗಿದ್ದರೂ ಸಂಪ್ರದಾಯ ಮತ್ತು ಖರ್ಚು ವೆಚ್ಚಕ್ಕೆ ಯೋಚನೆ ಮಾಡುವುದಿಲ್ಲ. ಆದ್ದರಿಂದ ಉತ್ತಮ ಸೌಲಭ್ಯ ಒದಗಿಸಬೇಕು. ಹುಣ್ಣಿಮೆ ಸಂದರ್ಭದಲ್ಲಿ ಚಕ್ಕಡಿಗಳಲ್ಲಿ ಜನರು ಬರುತ್ತಾರೆ. ಅಂತಹ ವೇಳೆ ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಸೂಚಿಸಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುವುದರಿಂದ ಉತ್ತಮ ವಸತಿ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಇತರ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಯೋಜನೆ ರೂಪಿಸಬೇಕು ಎಂದು ಸೂಚನೆ ನೀಡಿದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ವಸತಿ ಹಾಗೂ ದರ್ಶನಕ್ಕೆ ಅನುಕೂಲ ಕಲ್ಪಿಸಬೇಕು.
ದೇವಸ್ಥಾನ ಹಾಗೂ ಸುತ್ತಮುಲಿನ ಸರ್ಕಾರದ ಜಮೀನು ಒತ್ತುವರಿ ಆಗದಂತೆ ತಡೆಯಲು ಕಾಂಪೌಂಡ್ ಹಾಕಬೇಕು. ಸದ್ಯಕ್ಕೆ ವ್ಯಾಪಾರ-ವಹಿವಾಟು ಮಾಡುವ ಜನರಿಗೆ ಪ್ರತ್ಯೇಕ ಜಾಗ ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಮತ್ತು ದೇವಸ್ಥಾನ ಮಂಡಳಿ ಸೇರಿಕೊಂಡು ಭಕ್ತರಿಗೆ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಉತ್ತಮ ಸೌಲಭ್ಯ ಒದಗಿಸಿದರೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಸುಲಭ ದರ್ಶನಕ್ಕೆ ಅವಕಾಶ ಕಲ್ಪಿಸುವುದು ಪ್ರಥಮ ಆದ್ಯತೆ ಆಗಿರಬೇಕು ಎಂದು ತಿಳಿಸಿದರು.