ದೊಡ್ಡ ಕನಸುಗಳ ಈಡೇರಿಕೆಗೆ ಶಿಕ್ಷಣ ಬೇಕು: ಪ್ರೊ.ಡಿ.ಎಸ್.ಗುರು

| Published : Nov 22 2025, 01:15 AM IST

ಸಾರಾಂಶ

ಎಂಜಿನಿಯರಿಂಗ್ ಹಲವು ಶಾಖೆಗಳು ಶಾಸ್ತ್ರೀಯ ವಿಭಾಗಗಳಾದರೆ ಕಂಪ್ಯೂಟರ್‌ ಎಂಜಿನಿಯರಿಂಗ್‌ ರಾಣಿ ಇದ್ದಂತೆ. ಇಂದು ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ವಿಜ್ಞಾನ ಹಿಡಿತವನ್ನು ಸಾಧಿಸಿದೆ. ಆದರೆ, ಈಗ ತಂತ್ರಜ್ಞಾನ ವಿಜ್ಞಾನಕ್ಕಿಂತಲೂ ಬಹಳ ಮುಂದುವರೆದಿದ್ದು ಎಲ್ಲವನ್ನು ನಿಯಂತ್ರಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲದೇ ವಿದ್ಯಾರ್ಥಿಗಳು ಸಂಸ್ಕಾರಕ್ಕಾಗಿ ಶಿಕ್ಷಣವನ್ನು ಪಡೆಯಬೇಕು. ತಾವು ಅಂದುಕೊಂಡ ಗುರಿಯನ್ನು ಸಾಧಿಸಬೇಕೆಂದರೆ ದೊಡ್ಡ ದೊಡ್ಡ ಕನಸುಗಳಿರಬೇಕು ಆ ಕನಸುಗಳ ಈಡೇರಿಕೆಗೆ ಶಿಕ್ಷಣ ಇರಬೇಕು ಎಂದು ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಎಂಸಿಎ ವಿಭಾಗದ ಉದ್ಘಾಟನೆ ಹಾಗೂ ಅಭಿವಿನ್ಯಾಸ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ವಿಫಲವಾಗದೇ ಹೇಗೆ ಫಲ ನೀಡುತ್ತವೆಯೋ ಹಾಗೆಯೇ ಶಿಕ್ಷಣ ಎನ್ನುವುದು ಮನಸ್ಸಿಗೆ ನಾಟುವ ಮೊದಲು ಹೃದಯವನ್ನು ತಲುಪಬೇಕು ಎಂದರು.

ಎಂಜಿನಿಯರಿಂಗ್ ಹಲವು ಶಾಖೆಗಳು ಶಾಸ್ತ್ರೀಯ ವಿಭಾಗಗಳಾದರೆ ಕಂಪ್ಯೂಟರ್‌ ಎಂಜಿನಿಯರಿಂಗ್‌ ರಾಣಿ ಇದ್ದಂತೆ. ಇಂದು ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ವಿಜ್ಞಾನ ಹಿಡಿತವನ್ನು ಸಾಧಿಸಿದೆ. ಆದರೆ, ಈಗ ತಂತ್ರಜ್ಞಾನ ವಿಜ್ಞಾನಕ್ಕಿಂತಲೂ ಬಹಳ ಮುಂದುವರೆದಿದ್ದು ಎಲ್ಲವನ್ನು ನಿಯಂತ್ರಿಸುತ್ತಿದೆ ಎಂದರು.

ವಿದ್ಯಾರ್ಥಿಗಳು ನಿಯಮಿತವಾಗಿ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಿ, ಶಿಸ್ತುಬದ್ಧ ಜೀವನ ರೂಢಿಸಿಕೊಳ್ಳುವ ಮೂಲಕ ತಮಗೆ ಬೇಕೆನಿಸಿದುದನ್ನು ಮಾತ್ರ ಕಲಿತು ಅದನ್ನು ತಮ್ಮದನ್ನಾಗಿಸಿಕೊಳ್ಳಬೇಕು. ಯಾವುದನ್ನು ಪ್ರಶ್ನಿಸಿದೆ ಒಪ್ಪಿಕೊಳ್ಳಬೇಡಿ, ಪ್ರಶ್ನಿಸುವ ಮೂಲಕ ಅರ್ಥೈಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ಇಂದು ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಎಂಸಿಎ ವಿಭಾಗವು ಪ್ರಮುಖವಾಗಿ ಮೂರು ವಿಧದಲ್ಲಿ ಕಾರ್ಯ ನಿರ್ವಹಿಸುತ್ತದೆ. ತಾಂತ್ರಿಕ ವಿಭಾಗ ವಿಶ್ಲೇಷಣಾತ್ಮಕ, ಆಲೋಚನಾಕ್ರಮ, ವೃತ್ತಿ ವಿಭಾಗ ಇವುಗಳಿಗೆ ಅಗತ್ಯವಾದ ವಿಶೇಷ ಕೌಶಲ್ಯವನ್ನು ಮತ್ತು ಉದ್ಯೋಗಕ್ಕೆ ಬೇಕಾದ ತರಬೇತಿಯನ್ನು ನೀಡುತ್ತದೆ ಎಂದರು.

ಮುಂದಿನ ಭವಿಷ್ಯತಂತ್ರಜ್ಞಾನ ಕ್ಷೇತ್ರವಾಗಿದ್ದು, ಡಿಜಿಟಲ್ ಹಣಕಾಸು, ಸಂವಹನ ಕ್ಷೇತ್ರ ಇತ್ಯಾದಿಗಳಲ್ಲಿ ಮುಂದುವರೆಯಲು ತಾಂತ್ರಿಕ ಪದವೀಧರರು ಅವಶ್ಯವಿದ್ದು, ಜಾಗತಿಕವಾಗಿ ಮನ್ನಣೆ ಇರುವ ನೀವು ಭವಿಷ್ಯಕ್ಕಾಗಿ ಹೂಡಿಕೆ ಎನ್ನುವಂತೆ ಎಂಸಿಎ ಸೇರಿದ್ದೀರಿ ಎಂದು ಅವರು ಶುಭ ಹಾರೈಸಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಕೋಶಾಧ್ಯಕ್ಷ ಶ್ರೀಶೈಲ ರಾಮಣ್ಣವರ್ ಇದ್ದರು. ತ್ರಿವೇಣಿ ಪ್ರಾರ್ಥಿಸಿದರು. ವಿಭಾಗ ಮುಖ್ಯಸ್ಥೆ ಡಾ.ಡಿ. ಶೋಭಾ ಸ್ವಾಗತಿಸಿದರು. ಉಮೇಶ್ ವಂದಿಸಿದರು. ಗೀತಾಂಜಲಿ ನಿರೂಪಿಸಿದರು.