ಸಾರಾಂಶ
ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಉದ್ಯೋಗ ಮೇಳ ನಡೆಸುವ ಮೂಲಕ ಜಿಲ್ಲೆಯ ಏಳೂ ತಾಲೂಕಿನ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ : ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಉದ್ಯೋಗ ಮೇಳ ನಡೆಸುವ ಮೂಲಕ ಜಿಲ್ಲೆಯ ಏಳೂ ತಾಲೂಕಿನ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಜೀವನೋಪಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ವತಿಯಿಂದ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಇಲಾಖಾ ಕಾರ್ಯಕ್ರಮದಡಿ ಉದ್ಯೋಗ ಮೇಳವನ್ನು ಆತುರಾತುರವಾಗಿ ಆಯೋಜಿಸಲಾಗಿದೆ. ಪ್ರಚಾರದ ಕೊರತೆಯಿಂದ ಹೆಚ್ಚು ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಡಿಸೆಂಬರ್ ಒಳಗೆ ಬೃಹತ್ ಮಟ್ಟದ ಉದ್ಯೋಗ ಮೇಳ ಆಯೋಜಿಸಲು ಕ್ರಮ ವಹಿಸುವುದಾಗಿ ಹೇಳಿದರು.
ಕೌಶಲ್ಯ ಎಂಬುದು ಇಂದು ಬಹಳ ಮುಖ್ಯವಾಗಿದೆ. ಯಾವುದೇ ಉದ್ಯೋಗದಲ್ಲಿ ಕೌಶಲ್ಯ ಸಾಧಿಸಿದಲ್ಲಿ ಸುಲಭವಾಗಿ ಉದ್ಯೋಗ ಪಡೆಯಬಹುದು. ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಸಂದರ್ಶನವನ್ನು ಎದುರಿಸುವ ಧೈರ್ಯ ಮತ್ತು ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿವಳಿಕೆ ಬರುತ್ತದೆ. ಎಲ್ಲರೂ ಉದ್ಯೋಗ ಮೇಳದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಲಾಭವೇ ಹೊರತು ನಷ್ಟವೇನಿಲ್ಲ ಎಂದು ಅಭಿಪ್ರಾಯಪಟ್ಟರು.
ಇಲ್ಲಿ ಉದ್ಯೋಗ ಸಿಗಲಿಲ್ಲವೆಂದು ನಿರಾಶರಾಗುವುದು ಬೇಡ, ಪ್ರಯತ್ನವನ್ನು ಮುಂದುವರಿಸಿದರೆ ಮುಂದಿನ ಉದ್ಯೋಗ ಮೇಳದಲ್ಲಿ ಯಾವುದಾದರೊಂದು ಕಂಪನಿಯಲ್ಲಿ ಉದ್ಯೋಗ ಸಿಗುವ ಅವಕಾಶಗಳು ಸಿಕ್ಕೇ ಸಿಗುತ್ತವೆ. ಅವಕಾಶಗಳನ್ನು ಸಮಯೋಚಿತ ರೀತಿಯಲ್ಲಿ ಬಳಸಿಕೊಳ್ಳುವುದನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ ಸುಮಾರು 30ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು, ೩೦೦ ರಿಂದ ೪೦೦ ಮಂದಿಗೆ ಉದ್ಯೋಗ ದೊರೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಗೆ ಉದ್ಯೋಗ ದೊರಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು. ಉದ್ಯೋಗಾಕಾಂಕ್ಷಿಯೊಬ್ಬರಿಗೆ ಸಚಿವ ಎನ್. ಚಲುವರಾಯಸ್ವಾಮಿ ಅವರು ನೇಮಕಾತಿ ಪತ್ರ ವಿತರಿಸಿದರು. ಶಾಸಕ ಪಿ. ರವಿಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ, ಕೌಶಲ್ಯಾಭಿವೃದ್ಧಿ ಕೇಂದ್ರದ ಅಧಿಕಾರಿ ನಾಗಾನಂದ ಇತರರಿದ್ದರು.
ಸಚಿವರಿಂದ ಅಧಿಕಾರಿಗೆ ತರಾಟೆ:
ಉದ್ಯೋಗ ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ವಿಫಲರಾದ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ನಾಗಾನಂದ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತರಾಟೆಗೆ ತೆಗೆದುಕೊಂಡರು. ಜಿಲ್ಲಾಡಳಿತದ ಸಹಯೋಗದಲ್ಲಿ ಉತ್ತಮವಾಗಿ ಉದ್ಯೋಗ ಮೇಳವನ್ನು ಆಯೋಜಿಸುವುದರೊಂದಿಗೆ ಹೆಚ್ಚು ಕಂಪನಿಗಳನ್ನು ಆಹ್ವಾನಿಸಬೇಕಿತ್ತು. ಇದರಿಂದ ಜಿಲ್ಲೆಯ ಹಲವಾರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಲು ಅನುಕೂಲವಾಗುತ್ತಿತ್ತು. ಅದು ಬಿಟ್ಟು ಇಲಾಖೆಯೊಂದೇ ಈ ರೀತಿ ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಜಿಲ್ಲೆಯ ಏಳೂ ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಧ್ಯೇಯವನ್ನಿಟ್ಟುಕೊಂಡು ಮೇಳಗಳನ್ನು ಆಯೋಜಿಸುವಂತೆ ಕಟುವಾಗಿಯೇ ಹೇಳಿದರು.