ಸಾರಾಂಶ
ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ರಸ್ತೆಯ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿರುವ ಬೃಹತ್ ಉದ್ಯೋಗ ಮತ್ತು ಸಾಲ ಮೇಳದಲ್ಲಿ 120 ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಆರು ಪ್ರಮುಖ ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡಲು ಮುಂದೆ ಬಂದಿವೆ.
ಯುವ ಕಾಂಗ್ರೆಸ್ ನ ರಕ್ಷಾ ರಾಮಯ್ಯ ಚಾಲನೆ । 20 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಾಧ್ಯತೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಎಂ.ಎಸ್.ರಾಮಯ್ಯ ಯೂಥ್ ಫೌಂಡೇಷನ್ ನಿಂದ ಚಿಕ್ಕಬಳ್ಳಾಪುರದಲ್ಲಿ ಜನವರಿ 13 ರ ಶನಿವಾರದಂದು ಬೃಹತ್ ಉದ್ಯೋಗ ಮತ್ತು ಸಾಲ ಮೇಳ ಆಯೋಜಿಸಿದ್ದು, 20 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆಯಿದೆ.
ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ರಸ್ತೆಯ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿರುವ ಬೃಹತ್ ಉದ್ಯೋಗ ಮತ್ತು ಸಾಲ ಮೇಳದಲ್ಲಿ 120 ಕ್ಕೂ ಅಧಿಕ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಆರು ಪ್ರಮುಖ ಬ್ಯಾಂಕ್ ಗಳು ಸಾಲ ಸೌಲಭ್ಯ ನೀಡಲು ಮುಂದೆ ಬಂದಿವೆ.ಉದ್ಯೋಗ ಮೇಳಕ್ಕೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಚಾಲನೆ ನೀಡಲಿದ್ದು, ಸ್ಥಳದಲ್ಲಿಯೇ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲಿದ್ದಾರೆ. ಉದ್ಯೋಗ ಮೇಳಕ್ಕೆ ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಚಿಕ್ಕಬಳ್ಳಾಪುರ ಮತ್ತು ಆಸುಪಾಸಿನ ಜನರಿಗಾಗಿ ಇಂತಹ ಅತಿ ದೊಡ್ಡ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಬಿಪಿಒ, ಕೈಗಾರಿಕೆಗಳು, ಮಾರಾಟ ಪ್ರತಿನಿಧಿಗಳು ಹೀಗೆ ಹತ್ತು ಹಲವು ವಲಯಗಳಲ್ಲಿ ಉದ್ಯೋಗ ದೊರೆಯುವ ಸಂಭವವಿದೆ.ಈಗಾಗಲೇ ಯುವ ಸಮೂಹ ಉದ್ಯೋಗ ಮತ್ತು ಸಾಲಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಉದ್ಯೋಗ ಮೇಳಕ್ಕೆ ಆಗಮಿಸುವವರು ತಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು, ಆಧಾರ್, ಭಾವಚಿತ್ರ ಸೇರಿದಂತೆ ಸೂಕ್ತ ದಾಖಲಾತಿಗಳನ್ನು ತರಬೇಕು. ಅಗತ್ಯವಿರುವವರು ಈ ಮೇಳದ ಸದುಪಯೋಗ ಪಡೆಯುವಂತೆ ಎಂ.ಎಸ್. ರಕ್ಷಾ ರಾಮಯ್ಯ ಮನವಿ ಮಾಡಿದ್ದಾರೆ.
ಉದ್ಯೋಗ ಮತ್ತು ಸಾಲ ಮೇಳದ ಸಿದ್ದತೆಗಳನ್ನು ಕಾಂಗ್ರೆಸ್ ಮುಖಂಡ ಬಿ.ಎಸ್.ರಫೀಉಲ್ಲಾ, ಯುವ ಮುಖಂಡರಾದ ಕುಬೇರ್ ಅಚ್ಚು, ಅಲ್ಲು ಅನಿಲ್ ,ಷಾಹೀದ್, ಶಂಕರ ಮತ್ತಿತರರು ಪರಿಶೀಲಿಸಿದರು.-----
ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಉದ್ಯೋಗ ಮತ್ತು ಸಾಲ ಮೇಳಕ್ಕೆ ಭರದಿಂದ ಸಾಗಿದ ಸಿದ್ದತೆ.