ಟೋಲ್ ಶುಲ್ಕ ಪಡೆದು ರಸ್ತೆ ದುರಸ್ಥಿ ಮಾಡದ ಹಿನ್ನೆಲೆ ದೊಡ್ಡ ಮಾವತ್ತೂರ್ ಟೋಲ್ ಸ್ಥಗಿತಗೊಳಿಸುವಂತೆ ಶಾಸಕ ಡಾ. ಎಚ್.ಡಿ. ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಣಿಗಲ್ ಟೋಲ್ ಶುಲ್ಕ ಪಡೆದು ರಸ್ತೆ ದುರಸ್ಥಿ ಮಾಡದ ಹಿನ್ನೆಲೆ ದೊಡ್ಡ ಮಾವತ್ತೂರ್ ಟೋಲ್ ಸ್ಥಗಿತಗೊಳಿಸುವಂತೆ ಶಾಸಕ ಡಾ. ಎಚ್.ಡಿ. ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕುಣಿಗಲ್ ಚಿಕ್ಕ ಕೆರೆಯ ಮೇಲೆ ಇರುವಂತ ರೈಲ್ವೆ ಮೇಲ್ಸೆತುವೆಯ ಗುಂಡಿಗಳನ್ನು ಮುಚ್ಚಿಸುವಂತೆ ಶಾಸಕರು ಸೂಚಿಸಿದರು.ಎಇಇ ನಾಗರಾಜ್ ಪ್ರತಿಕ್ರಿಯಿಸಿ, ಕೆಶಿಪ್‌ನವರು ಈ ರಸ್ತೆ ನಿರ್ಮಾಣ ಮಾಡಿದ್ದಾರೆ. ಅವರು ಇಂದಿಗೂ ಕೂಡ ಸಾರ್ವಜನಿಕರಿಂದ ಟೋಲ್ ಹಣ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ದುರಸ್ತಿ ಕಾರ್ಯವನ್ನು ಅವರೇ ಮಾಡಬೇಕೆಂದರು.
ಈ ವಿಚಾರವಾಗಿ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾತನಾಡಿದ ಶಾಸಕ ಡಾ. ರಂಗನಾಥ, ಸೇತುವೆ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಕೆಶಿಪ್ ಅಧಿಕಾರಿಗಳು ಸಾರ್ವಜನಿಕರಿಂದ ಟೋಲ್ ಹಣ ವಸೂಲಿ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದರು.ಹೃದಯಾಘಾತದಿಂದ ಹೆಚ್ಚು ಜನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಪುನೀತ್ ರಾಜಕುಮಾರ ಹೃದಯ ಜ್ಯೋತಿ ಹೆಸರಿನಲ್ಲಿ ರಾಜ್ಯದಲ್ಲಿ ಹೊಸ ಯೋಜನೆ ಪ್ರಾರಂಭವಾಗಿದೆ .ಆದರೆ ಕುಣಿಗಲ್ ತಾಲೂಕು ಈ ಯೋಜನೆಯಿಂದ ಹೊರ ಉಳಿದಿತ್ತು ಮುಂದಿನ ದಿನಗಳಲ್ಲಿ ಅದನ್ನು ಸೇರಿಸುತ್ತೇವೆ ಎಂದರು.ತಾಲೂಕು ವೈದ್ಯಾಧಿಕಾರಿ ಮರಿಯಪ್ಪ ಮಾತನಾಡಿ, ತಾಲೂಕಿನದ್ಯಂತ 6 ಡೆಂಘೀ ಪ್ರಕರಣಗಳು ಇದ್ದವು. ಆದರೆ ಯಾವುದೇ ಸಾವು ಸಂಭವಿಸಿಲ್ಲ, ಚಿಕಿತ್ಸೆಗಾಗಿ ತಾಲೂಕಿನ ಎಲ್ಲಾ ಆಸ್ಪತ್ರೆಯಲ್ಲೂ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಆಶ್ರಯ ಯೋಜನೆ ಅಡಿ 175 ಎಕರೆ ಪ್ರದೇಶದಲ್ಲಿ ತಾಲೂಕಿನಾದ್ಯಂತ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸರ್ಕಾರಿ ಅನುದಾನ ಬಳಸಿಕೊಂಡು ಪಟ್ಟಣದ ಬಿದನಗೆರೆ ಮಾದರಿಯಲ್ಲಿ ನಿವೇಶನ ನಿರ್ಮಾಣ ಮಾಡಬೇಕು. ಮಂಜೂರಾಗಿರುವ 2000 ಮನೆಗಳನ್ನು ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.ಉಪವಿಬಾಗಾಧಿಕಾರಿ ವಿಶ್ವನಾಥ, ತಹಸಿಲ್ದಾರ್ ರಮೇಶ್, ಪಿ ಡಬ್ಲ್ಯೂ ಡಿ ಎಇಇ ನಾಗರಾಜ್ ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ, ವಲಯ ಅರಣ್ಯಾಧಿಕಾರಿ ಮಂಜುನಾಥ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.