ಸಾರಾಂಶ
ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಸಂವಿಧಾನ ರಕ್ಷಣೆಯ ಧ್ಯೇಯದೊಂದಿಗೆ ಬೆಳಗಾವಿಯಲ್ಲಿ ಜ. 21ರಂದು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ನಡೆಸಲಾಗುತ್ತಿದೆ. ಕಿತ್ತೂರು ಕರ್ನಾಟಕ ಜಿಲ್ಲೆಗಳಿಂದ 75 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಮಾವೇಶದ ಮೂಲಕ ದೇಶಕ್ಕೆ ದೊಡ್ಡ ಸಂದೇಶ ರವಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಸಮಾವೇಶದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಅಖಂಡ ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪಕ್ಷದ ನಾಯಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ಬೆಳಗಾವಿ ಸಮಾವೇಶದ ಮೂಲಕ ದೊಡ್ಡ ಸಂದೇಶ ರವಾನಿಸಲಾಗುತ್ತಿದೆ. ದೇಶಕ್ಕಾಗಿ ಗಾಂಧೀಜಿ ಹಾಗೂ ಕಾಂಗ್ರೆಸ್‌ನ ಇತಿಹಾಸವನ್ನು ಸಾರಲಾಗುತ್ತಿದೆ ಎಂದರು.
75 ಸಾವಿರ ಜನ:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಡಿ. 27ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆ ಕಾರ್ಯಕ್ರಮವನ್ನು ಜ. 21ರಂದು ನಡೆಸಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ನಾಯಕರ ಸಭೆ ನಡೆಸಲಾಗಿದೆ. ಕಿತ್ತೂರು ಕರ್ನಾಟಕ ಭಾಗದಿಂದಲೇ 75 ಸಾವಿರ ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಇತರ ಭಾಗಗಳಿಂದ ಸಾಂಕೇತಿಕವಾಗಿ ಜನರು ಆಗಮಿಸುತ್ತಿದ್ದಾರೆ ಎಂದರು.
ಜ. 21ರಂದು ಬೆಳಗ್ಗೆ 10.30ಕ್ಕೆ ಸರ್ಕಾರಿ ಕಾರ್ಯಕ್ರಮ ಸುವರ್ಣಸೌಧದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕ್ರಮಕ್ಕೆ ಎಲ್ಲ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಸಂವಿಧಾನ ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೇಶಕ್ಕೆ ದೊಡ್ಡ ಸಂದೇಶ ರವಾನಿಸಲು ಎಐಸಿಸಿ ಈ ಕಾರ್ಯಕ್ರಮ ರೂಪಿಸಿದೆ. ಕಾನೂನು ಸಚಿವ ಎಚ್.ಕೆ. ಪಾಟೀಲ ಅವರಿಗೆ ಗಾಂಧಿ ಭಾರತ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿದ್ದೇವೆ. ಸರ್ಕಾರ ಹಾಗೂ ಪಕ್ಷ ಯಾವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಇದೇ ವೇಳೆ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಫೆಬ್ರವರಿ 2ನೇ ವಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಪೂರಕ ತಯಾರಿಯೂ ನಡೆದಿದೆ ಎಂದು ಡಿ.ಕೆ. ಶಿವಕುಮಾರ ಹೇಳಿದರು.
ಗೋಡ್ಸೆ ಸಂತತಿ:
ನಕಲಿ ಗಾಂಧಿಗಳು ಸಮಾವೇಶ ನಡೆಸುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾವೆಲ್ಲರೂ ಅಸಲಿ ಗಾಂಧಿಗಳು, ಗೋಡ್ಸೆ ಸಂತತಿಯವರು ನಕಲಿ ಗಾಂಧಿಗಳೆಂದು ಟೀಕೆ ಮಾಡುವುದು ಸಹಜ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಸಂತೋಷ ಲಾಡ್, ಮಂಕಾಳ ವೈದ್ಯ, ಶಿವಾನಂದ ಪಾಟೀಲ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಇದ್ದರು.