ಸಾರಾಂಶ
ರಾಮನಗರ : ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದೆ.
ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಕಟ್ಟದೆ ಹಾಗೆಯೇ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಸವಾರರಿಗೆ ಬ್ರೇಕ್ ಹಾಕಲು ಬಿಡದಿ ಬಳಿಯ ನಿರ್ಗಮನ (ಎಕ್ಸಿಟ್) ರಸ್ತೆಯನ್ನು ಬಂದ್ ಮಾಡಲಾಗಿದೆ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇದ್ದ ಸಂಪರ್ಕವನ್ನು ಕಡಿತಗೊಳಿಸಿದೆ. ಮೈಸೂರಿನಿಂದ ಬರುತ್ತಿದ್ದ ವಾಹನ ಸವಾರರು ಬಿಡದಿಯಿಂದ ಮುಂದೆ ಸರ್ವೀಸ್ ರಸ್ತೆಗೆ ಇಳಿದು ಟೋಲ್ ತಪ್ಪಿಸಿಕೊಳ್ಳುತ್ತಿದ್ದರು.
ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸಿ ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟದೇ ಸರ್ವೀಸ್ ರಸ್ತೆ ಮೂಲಕ ಬೆಂಗಳೂರು ತಲುಪುತ್ತಿದ್ದರು. ಹೀಗಾಗಿ, ಟೋಲ್ ತಪ್ಪಿಸುವ ವಾಹನಗಳಿಗೆ ಕಡಿವಾಣ ಹಾಕಲು ಹೆದ್ದಾರಿ ಪ್ರಾಧಿಕಾರ ಪ್ರವೇಶಕ್ಕೆ ಮಾತ್ರ ಅವಕಾಶ ಕೊಟ್ಟು, ನಿರ್ಗಮನ ರಸ್ತೆಯನ್ನು ಬಂದ್ ಮಾಡಿದೆ. ಇದೀಗ ಸರ್ವೀಸ್ ರಸ್ತೆಯನ್ನೇ ಬಂದ್ ಮಾಡಿದ್ದರಿಂದ ಬೆಂಗಳೂರಿಗೆ ಬರುವ ವಾಹನ ಸವಾರರು ಶೇಷಗಿರಿಹಳ್ಳಿ ಬಳಿ ಟೋಲ್ ಪಾವತಿಸಿಯೇ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಹೆದ್ದಾರಿ ಪ್ರಾಧಿಕಾರದ ಈ ನಡೆಗೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.