ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸುವ ಉದ್ದೇಶದಿಂದ ಪೂರ್ವಭಾವಿಯಾಗಿ ಬುಧವಾರ ಮಂಗಳೂರಿನಲ್ಲಿ ಬೃಹತ್ ‘ತಿರಂಗಾ ಯಾತ್ರೆ’ ನಡೆಯಿತು.ಕರಾವಳಿ ಉತ್ಸವ ಮೈದಾನದಿಂದ ಆರಂಭವಾದ ತಿರಂಗ ಯಾತ್ರೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಮದೇವ ಶೆಣೈ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಮತ್ತಿತರರು ಚಾಲನೆ ನೀಡಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಸಾಗಿದ ಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಾರತ ಮಾತೆಗೆ ಜಯಕಾರ, ಪ್ರಧಾನಿ ಮೋದಿಯ ಗುಣಗಾಣದೊಂದಿಗೆ ಯಾತ್ರೆ ಸಾಗಿತು. ಯಾತ್ರೆಯ ಮುಂಚೂಣಿಯಲ್ಲಿ ಪುಟಾಣಿಗಳ ಸ್ಕೇಟಿಂಗ್ ಕಸರಸ್ತು ಎಲ್ಲರ ಗಮನಸೆಳೆಯಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಸಾಗುವ ಮೂಲಕ ಯಾತ್ರೆಯ ಮೆರುಗು ಹೆಚ್ಚಿಸಿದರು. ಯಾತ್ರೆ ಲಾಲ್‌ಭಾಗ್ ವೃತ್ತದ ಬಳಿ ಬಂದಾಗ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾರದಾ ವಿದ್ಯಾಲಯದ ಮುಖ್ಯಸ್ಥ ಪ್ರೊ.ಎಂ.ಬಿ.ಪುರಾಣಿಕ್ ಸೇರಿದಂತೆ ಬಿಜೆಪಿಯ ಪ್ರಮುಖರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಂದೆ ಸಾಗಿದರು.
ಯಾತ್ರೆಯಲ್ಲಿ ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ವಿಕಾಸ್ ಪುತ್ತೂರು, ಮಾಜಿ ಮೇಯರ್ ಜಯಾನಂದ ಅಂಚನ್, ಮುಖಂಡರಾದ ಜಗದೀಶ್ , ನಂದನ್ ಮಲ್ಯ, ರಮೇಶ್ ಕಂಡೆಟ್ಟು, ಸತೀಶ್ ಪ್ರಭು, ನಿತಿನ್ ಕುಮಾರ್, ಅಶೋಕ್ ಶೆಟ್ಟಿ ಸರಪಾಡಿ,ಪಾಲಿಕೆ ಸದಸ್ಯರಾದ ಶಕಿಲಾ ಕಾವಾ, ಪೂರ್ಣಿಮಾ ಮತ್ತಿತರರು ಇದ್ದರು.