ಬಿಗ್ ಬಾಸ್-12ನೇ ಆವೃತ್ತಿಯ ರಿಯಾಲಿಟಿ ಶೋ ವಿಜೇತ ಗಿಲ್ಲಿ (ನಟರಾಜ್‌), ಸೋಮವಾರ ಹುಟ್ಟೂರು ಮಂಡ್ಯ ಜಿಲ್ಲೆ ಮಳವಳ್ಳಿಗೆ ಆಗಮಿಸಿದ್ದು, ತವರಿನ ಜನ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಬಿಗ್ ಬಾಸ್-12ನೇ ಆವೃತ್ತಿಯ ರಿಯಾಲಿಟಿ ಶೋ ವಿಜೇತ ಗಿಲ್ಲಿ (ನಟರಾಜ್‌), ಸೋಮವಾರ ಹುಟ್ಟೂರು ಮಂಡ್ಯ ಜಿಲ್ಲೆ ಮಳವಳ್ಳಿಗೆ ಆಗಮಿಸಿದ್ದು, ತವರಿನ ಜನ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ಮಳವಳ್ಳಿ ಪಟ್ಟಣದ ಹೊರಭಾಗದಲ್ಲಿರುವ ಶಕ್ತಿದೇವತೆ ಶ್ರೀದಂಡಿನ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಿಗ್ ಬಾಸ್ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದರು. ಅನಂತ್ ವೃತ್ತದ ಬಳಿ ಗಿಲ್ಲಿಗೆ ಅಭಿಮಾನಿಗಳು ಬೃಹತ್ ಹೂವಿನ ಹಾರ ಹಾಕಿ ಹೂಮಳೆ ಸುರಿಸಿದರು. ಈ ವೇಳೆ, ಬಿಗ್‌ಬಾಸ್‌ನಲ್ಲಿ ನೀಡಿದ ಪ್ರಶಸ್ತಿಯನ್ನು ಪ್ರದರ್ಶಿಸಿದ ಗಿಲ್ಲಿ, ಸಾವಿರಾರು ಅಭಿಮಾನಿಗಳ ಮುಂದೆ ಪ್ರಶಸ್ತಿಯನ್ನು ಪ್ರದರ್ಶಿಸಿ, ಟ್ರೋಫಿಗೆ ಮುತ್ತು ನೀಡಿದರು.

ಅಲ್ಲಿಂದ ಮೆರವಣಿಗೆಯಲ್ಲಿಯೇ ಹುಟ್ಟೂರು ದಡದಪುರಕ್ಕೆ ಆಗಮಿಸಿದರು. ಈ ವೇಳೆ, ಪ್ರತಿಯೊಂದು ಗ್ರಾಮದ ಗೇಟ್‌ನಲ್ಲಿ ಗಿಲ್ಲಿಗೆ ಮಂಗಳಾರತಿ ಎತ್ತಿ, ತಮಟೆ ವಾದ್ಯಗಳೊಂದಿಗೆ ಈಡುಗಾಯಿ ಒಡೆದು ಸ್ವಾಗತ ಕೋರಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕ-ಯುವತಿಯರು ಜಯಘೋಷದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಿಲ್ಲಿ ಗಿಲ್ಲಿ ಎಂಬ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು. ಮೆರವಣಿಗೆ ವೇಳೆ, ಬೈಕ್‌ ರ್‍ಯಾಲಿ ಕೂಡ ಆಯೋಜನೆಯಾಗಿತ್ತು.

ಈ ವೇಳೆ, ಗಿಲ್ಲಿ ನಟನೊಂದಿಗೆ ಫೋಟೋ ತೆಗೆದುಕೊಳ್ಳಲು ಯುವಕ-ಯುವತಿಯರು ಮುಗಿಬಿದ್ದರು. ಫೋಟೋ ತೆಗೆದುಕೊಳ್ಳುವ ಸಂದರ್ಭದಲ್ಲಿ ಎಳೆದಾಡಿದರು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು.

ಉಚಿತ ಬಿರಿಯಾನಿ ವಿತರಣೆ:ಗಿಲ್ಲಿ ನಟ ಆಗಮಿಸಿದ ವೇಳೆ ಪಟ್ಟಣದ ಆರ್.ಆರ್ ರೆಸ್ಟೊರೆಂಟ್‌ನಲ್ಲಿ ಮಾಜಿ ಪುರಸಭೆ ಸದಸ್ಯ ರಾಜು ಅವರ ನೇತೃತ್ವದಲ್ಲಿ ಮಶ್ರೂಮ್ ಬಿರಿಯಾನಿ, ಚಿಕನ್ ಬಿರಿಯಾನಿ ಹಾಗೂ ಕಾಲ್‌ಸೂಪ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು. ಅಲ್ಲದೆ, ಗಿಲ್ಲಿ ನಟನ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಲಾಯಿತು.ಹರಿಹರದಲ್ಲೂ ಸಂಭ್ರಮಾಚರಣೆ:

ಇದೇ ವೇಳೆ, ದಾವಣಗೆರೆ ಜಿಲ್ಲೆ ಹರಿಹರದ ಹರಪನಹಳ್ಳಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.ಕೋಟ್‌:

ಬಿಗ್ ಬಾಸ್-12ನೇ ಆವೃತ್ತಿ ರಿಯಾಲಿಟಿ ಶೋನಲ್ಲಿ ಗೆದ್ದ ನನ್ನನ್ನು ಇಷ್ಟೊಂದು ಅಭಿಮಾನದಿಂದ ಸ್ವಾಗತಿಸಿ ಬರಮಾಡಿಕೊಂಡಿದ್ದನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಶಕ್ತಿದೇವತೆ ದಂಡಿನ ಮಾರಮ್ಮನ ಪೂಜೆ ಸಲ್ಲಿಸಿ ನನ್ನ ಹುಟ್ಟೂರಿನ ಜನರನ್ನು ನೋಡುತ್ತಿರುವುದು ಖುಷಿ ಕೊಟ್ಟಿದೆ.

- ಗಿಲ್ಲಿನಟ.