ಚೀನಾ ಬಳಿಕ ಭಾರತದಲ್ಲಿ ಅತೀ ದೊಡ್ಡ ಮೆಟ್ರೋ ಸಂಪರ್ಕ: ಕೇಂದ್ರ ಸಚಿವ ಪುರಿ

| Published : Feb 29 2024, 02:03 AM IST

ಸಾರಾಂಶ

ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭವಾದ ‘ರೇವಾ ಭೌಗೋಳಿಕ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರ’ ಉದ್ಘಾಟನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂದಿನ ಮೂರು ವರ್ಷದಲ್ಲಿ ಚೀನಾ ಬಳಿಕ ಭಾರತ ಜಗತ್ತಿನ ಎರಡನೇ ಅತೀದೊಡ್ಡ ಮೆಟ್ರೋ ಸಂಪರ್ಕ ಹೊಂದುವ ದೇಶವಾಗಲಿದೆ ಎಂದು ಕೇಂದ್ರ ವಸತಿ, ನಗರ ವ್ಯವಹಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

ಅವರು ಬುಧವಾರ ರೇವಾ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭವಾದ ‘ರೇವಾ ಭೌಗೋಳಿಕ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರ’ ಉದ್ಘಾಟಿಸಿ ಮಾತನಾಡಿದರು.

ಭಾರತದ ನಗರಸಾರಿಗೆ ಪ್ರಗತಿಯ ಹಾದಿಯಲ್ಲಿದೆ. ಅದರಲ್ಲೂ ಮೆಟ್ರೋ ಮಾರ್ಗ ಹೆಚ್ಚಿನ ಪ್ರಗತಿ ಸಾಧಿಸಲಿದೆ. ಪ್ರಸ್ತುತ ನಮ್ಮಲ್ಲಿ 906 ಕಿ.ಮೀ. ಮೆಟ್ರೋ ರೈಲು ಮಾರ್ಗವಿದೆ. ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳುವ ಗುರಿಯೊಂದಿಗೆ 939 ಕಿ.ಮೀ. ಮೆಟ್ರೋ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ಈ ಮೂಲಕ ನಾವು ಜಪಾನ್‌ ಹಾಗೂ ಕೊರಿಯಾ ಮೆಟ್ರೋ ಮಾರ್ಗವನ್ನು ಹಿಂದಿಕ್ಕಲಿದ್ದೇವೆ. ಎರಡು ವರ್ಷದಲ್ಲಿ 1560 ಕಿ.ಮೀ. ಮೆಟ್ರೋ ಮಾರ್ಗ ಹೊಂದಿರುವ ಅಮೆರಿಕಾವನ್ನೂ ಹಿಂದಿಕ್ಕಲಿದ್ದೇವೆ. ಜಾಗತಿಕ ಮಟ್ಟದಲ್ಲಿ ಚೀನಾ ಅತೀ ಉದ್ದದ ಮೆಟ್ರೋ ಸಂಪರ್ಕ ಹೊಂದಿದ್ದು, ನಂತರದ ಸ್ಥಾನದಲ್ಲಿ ಭಾರತ ಅತೀ ಉದ್ದದ ಮೆಟ್ರೋ ಹೊಂದಿರುವ ದೇಶವಾಗಲಿದೆ ಎಂದು ತಿಳಿಸಿದರು.

ಮೆಟ್ರೋ ಜೊತೆಗೆ ವಿಮಾನ ನಿಲ್ದಾಣಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿವೆ. 2013ರಲ್ಲಿ 74 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ ಈಗ 150 ದಾಟಿದೆ. ಬೆಂಗಳೂರು ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಜನದಟ್ಟಣೆಯಿಂದ ಕೂಡಿವೆ. ಏರ್‌ ಇಂಡಿಯಾ ಖಾಸಗೀಕರಣದಿಂದಾಗಿ ಹೆಚ್ಚು ಪ್ರಗತಿಯಲ್ಲಿದ್ದು, ಸಾವಿರ ವಿಮಾನಗಳನ್ನು ನಿಭಾಯಿಸುತ್ತಿದೆ. ಪ್ರಧಾನಿ ಮೋದಿ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿದ್ದರಿಂದಲೇ ಇಂತಹ ಸಾಧನೆ ಸಾಧ್ಯವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಭಾರತ ಮೊದಲು ನೀತಿಯಿಂದಾಗಿ ದೇಶ ತಲೆ ಎತ್ತುವಂತಾಗಿದೆ. ಪ್ರತಿವರ್ಷ ಒಂದು ಚಿಕಾಗೋ ನಗರಕ್ಕೆ ಸಮನಾದಷ್ಟು ನಗರ ಪ್ರದೇಶ ನಮ್ಮಲ್ಲಿ ಬೆಳವಣಿಗೆಯಾಗುತ್ತಿದೆ. ದೇಶದಲ್ಲಿ ಪ್ರತಿದಿನ 5 ಮಿಲಿಯನ್‌ ಬ್ಯಾರೆಲ್‌ ಪೆಟ್ರೋಲಿಯಂ ಉತ್ಪನ್ನ ಬಳಸುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಮ್ಮ ದೇಶದಲ್ಲಿ ಪೆಟ್ರೋಲಿಯಂ ಇಂಧನದ ಯಾವುದೇ ಸಮಸ್ಯೆ ಉಂಟಾಗಿಲ್ಲ. ಜಾಗತಿಕ ಮಟ್ಟದಲ್ಲಿ ಎರಡು ವರ್ಷದಲ್ಲಿ ಭಾರತದಲ್ಲಿ ಮಾತ್ರ ಪೆಟ್ರೋಲ್‌ ದರ ಇಳಿಕೆಯಾಗಿದೆ. ಇನ್ನು, ಸುಸ್ಥಿರ ಗ್ರೀನ್‌ ಹೈಡ್ರೋಜನ್‌, ಹಸಿರು ಇಂಧನದ ಕುರಿತು ಹೆಚ್ಚಿನ ಸಂಶೋಧನೆಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.