ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ದೆಹಲಿಯಲ್ಲಿ ರೈತ ಹೋರಾಟಗಾರರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಾಂತ್ಯ ರೈತ ಸಂಘ ಸೇರಿದಂತೆ ರೈತಪರ ಸಂಘಟನೆಗಳ ವತಿಯಿಂದ ಮಂಗಳವಾರ ಸಾಂಕೇತಿಕವಾಗಿ ಗ್ರಾಮೀಣ ಬಂದ್ ಹಾಗೂ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪವನ್‌ಕುಮಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಯೋಗೀಶ್ವರಸ್ವಾಮಿ, ರೈತರು ದೇಶದ ಬೆನ್ನೆಲು ಎನ್ನುವ ಸರ್ಕಾರಗಳು ರೈತರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರ್ಕಾರದ ವಿರುದ್ಧ ರೈತರು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲು ದೆಹಲಿಗೆ ಬರುತ್ತಿರುವಾಗ ಸರ್ಕಾರ ಅಶ್ರುವಾಯು ಸಿಡಿಸುತ್ತ ಬಲ ಪ್ರಯೋಗದ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಸರಿಯಲ್ಲ. ಈ ಹಿಂದೆ ಕೃಷಿ ಸಂಬಂದಿತ ಕಾಯ್ದೆಗಳನ್ನು ಹಿಂಪಡೆಯುವಂತೆ ವರ್ಷಗಳ ಕಾಲ ಧರಣಿ ಮಾಡಿದರೂ ಹಿಂಪಡೆಯಲಾಗುವುದೆಂದು ಸುಳ್ಳು ಭರವಸೆ ನೀಡಿತು. ಈ ಚಳುವಳಿ ನಡೆದು ಮೂರು ವರ್ಷಗಳೇ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬೆಳೆ ನಷ್ಠದಿಂದ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿರುವಾಗ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಕೊಬ್ಬರಿ ನಫೆಡ್ ನೋಂದಣಿಯಲ್ಲೂ ರೈತರಿಗೆ ಅನ್ಯಾಯವಾಗಿದೆ. ರೈತರು ಉತ್ಪಾದಿಸುವ ಕೊಬ್ಬರಿಯನ್ನು ತಾಲೂಕುವಾರು ಉತ್ಪಾದನೆಗನುಗುಣವಾಗಿ ಖರೀದಿ ಪ್ರಮಾಣ ನಿಗದಿ ಮಾಡಿ ತುರ್ತಾಗಿ ಖರೀದಿ ಮಾಡಬೇಕು. ತೆಂಗು ಬೆಳೆಗೆ ಕಾಡುತ್ತಿರುವ ಕೀಟ ಮತ್ತು ರೋಗ ಬಾಧೆ ನಿರ್ವಹಣೆಗೆ ವಿಶೆಷ ಪ್ಯಾಕೇಜ್ ಘೋಷಿಸಬೇಕು. ನಫೆಡ್ ಖರೀದಿ ಕೇಂದ್ರದಲ್ಲಿ ಖರೀದಿಸಿದ ಕೊಬ್ಬರಿಯನ್ನು ಮಾರುಕಟ್ಟೆಗೆ ಮತ್ತೆ ಮಾರಾಟ ಮಾಡದೆ ಮೌಲ್ಯವರ್ಧಿತ ಎಣ್ಣೆ ತಯಾರಿಸಿ ಪಡಿತರ ವಿತರಣೆ ಮತ್ತು ಶಾಲಾ ಬಿಸಿಯೂಟಕ್ಕೆ ವಿತರಿಸಬೇಕೆಂದು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಪ್ರಾಂತ್ಯ ರೈತ ಸಂಘ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಬ್ಯಾಂಕ್‌ಗಳ ಸಾಲ ಕಟ್ಟುವುದು ದುಸ್ತರವಾಗಿದೆ. ರೈತರ ಸಾಲಮನ್ನಾ ವಿಚಾರವಾಗಿ ರಾಜಕೀಯ ಮಾಡುವ ಸರ್ಕಾರಗಳು ತನ್ನ ಧೋರಣೆ ಬಿಟ್ಟು ರಾಜ್ಯ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯ ಮಟ್ಟದಲ್ಲಿ ಎಂ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತರಬೇಕು. ಕೇವಲ ಭರವಸೆ, ಸುಳ್ಳು ಆಶ್ವಾಸನೆಯನ್ನು ಸರ್ಕಾರಗಳು ಬಿಟ್ಟು ರೈತಪರ ಯೋಜನೆಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಜಯಚಂದ್ರಶರ್ಮ, ರೈತ ಮುಖಂಡರಾದ ದೇವರಾಜು ತಿಮ್ಲಾಪುರ, ಗಂಗಾಧರ್, ಶ್ರೀಹರ್ಷ ಗಂಗನಘಟ್ಟ, ಚಂದನ್‌ರಾಜ್, ಷಡಕ್ಷರಿ, ರಾಜಮ್ಮ, ಶ್ರೀಕಾಂತ್‌ಕೆಳಹಟ್ಟಿ, ಸಿದ್ದಪ್ಪ ಬಳುವನೇರಲು ಮತ್ತಿತರರಿದ್ದರು.