ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆಯೇ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ಥಾನ ಜಿಂಬಾದಾರ್ ಎಂಬುದಾಗಿ ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯವಾಗಿದ್ದು, ಇಂತಹ ದೇಶದ್ರೋಹಿ ಘೋಷಣೆ ಕೂಗಿದವರನ್ನು ಬಂಧಿಸಲು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕ ನಗರದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿತು.ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ಹುತಾತ್ಮ ಯೋಧರ ಸ್ಮರಣಾರ್ಥ ಉದ್ಯಾನವನದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಅಲ್ಲಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿ ಬಳಿ ತಲುಪಿದರು. ಅಲ್ಲಿ ಕಾಂಗ್ರೆಸ್ ಕಚೇರಿ ರಸ್ತೆಗೆ ಬ್ಯಾರಿಕೇಡ್ ಹಾಕಿ, ಪೊಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದರು. ಪಾಕಿಸ್ತಾನ ಪರ ಘೋಷಣೆ ಕೂಗಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ಸಿನ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಪ್ರತಿಭಟನಾನಿರತರ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದರು.
ಇದೇ ವೇಳೆ ಮಾತನಾಡಿದ ಪಕ್ಷದ ರೈತ ಮೋರ್ಚಾದ ಹಿರಿಯ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ, ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯವಾಗಿದೆ. ದೇಶದ್ರೋಹಿ ಘೋಷಣೆಗಳನ್ನು ಕೂಗಿದವರನ್ನು ತಕ್ಷಣವೇ ಬಂಧಿಸಬೇಕು. ಇನ್ನು ಪಾಕ್ ಪರ ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ ಮಾಧ್ಯಮದವರನ್ನೇ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ನಾಸೀರ್ ಹುಸೇನ್ ಗದರಿಸಿ, ‘ನಡಿಯೋ ಯಾವೋನೌನು’ ಎಂಬುದಾಗಿ ಅಸಭ್ಯ ವರ್ತನೆ ತೋರಿದ್ದು, ಇದು ಸಂಸದೀಯ ವರ್ತನೆಯಲ್ಲ. ನಾಸೀರ್ ಹುಸೇನ್‌ದು ಅನಾರೀಕ ಪ್ರವೃತ್ತಿಯಾಗಿದೆ ಎಂದು ದೂರಿದರು.ಸ್ವತಃ ಕಾಂಗ್ರೆಸ್ಸಿನ ಹಿರಿಯ ಮುಖಂಡ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಇಂತಹ ಕೃತ್ಯ ನಡೆದಿದ್ದು ಅಸಹನೀಯ. ಇದು ಸಹಿಸಲು ಸಾಧ್ಯವಿಲ್ಲ ವೆಂಬುದಾಗಿ ಹೇಳಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗುವವರು, ಅಂತಹ ದುಷ್ಕರ್ಮಿಗಳನ್ನು ಸಮರ್ಥಿಸಿಕೊಳ್ಳುವಂತೆ ಮಾಧ್ಯಮದವರ ಮೇಲೆಯೇ ದುರ್ವರ್ತನೆ ತೋರಿದ ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಸಚಿವ ಮುನಿಯಪ್ಪ ಸೂಕ್ತ ರೀತಿ ಪ್ರತಿಕ್ರಿಯಿಸಿದ್ದಾರೆ. ತಕ್ಷಣವೇ ನಾಸೀರ್ ಹುಸೇನ್‌ರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಕಾಂಗ್ರೆಸ್ ಪಕ್ಷವು ದೇಶಕ್ಕೆ ಮಾರಕ ಕಾಯಿಲೆ ಇದ್ದಂತೆ. ಅದರಲ್ಲೂ ಪಾಕಿಸ್ಥಾನದ ಪರ ಕಾಂಗ್ರೆಸ್ಸಿನವರು ಘೋಷಣೆ ಕೂಗಿದ್ದು, ದೇಶ ದ್ರೋಹದ ಕೆಲಸವಾಗಿದೆ. ಇಂತಹ ಖದೀಮರು ರಾಜ್ಯಸಭೆಗೆ ಆಯ್ಕೆಯಾಗಿದ್ದು, ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ತಕ್ಷಣವೇ ಕಾಂಗ್ರೆಸ್ ಪಕ್ಷವು ಇಂತಹ ದೇಶದ್ರೋಹಿ ಚಟುವಟಿಕೆಗಳ ಬಗ್ಗೆ, ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರ ಬಗ್ಗೆ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲಿ ಎಂದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಎಲ್.ಶಿವಪ್ರಕಾಶ ಮಾತನಾಡಿ, ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಕೆಲಸ ಆಗಬೇಕು. ಆಹಾರ ಸಚಿವ ಎಚ್.ಕೆ. ಮುನಿಯಪ್ಪ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ವರ್ತನೆ ಖಂಡಿಸಿದ್ದಾರೆ. ತಕ್ಷಣವೇ ನಾಸೀರ್‌ಗೆ ರಾಜ್ಯಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಪಕ್ಷದ ಮುಖಂಡ ಡಾ.ನಾಸೀರ್ ಅಹಮ್ಮದ್ ಮಾತನಾಡಿ, ರಾಜ್ಯಸಭೆ ಚುನಾವಣೆ ಒಂದು ಸಹಜ ಪ್ರಕ್ರಿಯೆ. ಆದರೆ, ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆದ್ದ ವೇಳೆ ಆ ರಾಜ್ಯ ಸಭಾ ಸದಸ್ಯನ ಪರ ಘೋಷಣೆ ಕೂಗುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ, ಶತೃ ರಾಷ್ಟ್ರ ಪಾಕಿಸ್ಥಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ದುಷ್ಕರ್ಮಿಗಳನ್ನು ತಕ್ಷಣವೇ ನೆರೆಯ ಪಾಕಿಸ್ಥಾನಕ್ಕೆ ಕಳಿಸಬೇಕು. ದುಷ್ಕರ್ಮಿಗಳು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.ಪಕ್ಷದ ಮುಖಂಡರಾದ ಪಿ.ಸಿ.ಶ್ರೀನಿವಾಸ ಭಟ್, ಮಾಯಕೊಂಡ ಜಿ.ಎಸ್.ಶ್ಯಾಮ್, ಎಸ್.ರಮೇಶ ನಾಯ್ಕ, ಟಿಪ್ಪು ಸುಲ್ತಾನ್, ಎಚ್.ಪಿ.ವಿಶ್ವಾಸ, ಧನುಷ್ ರೆಡ್ಡಿ, ಕಿಶೋರಕುಮಾರ, ಶಿವನಗೌಡ ಟಿ.ಪಾಟೀಲ, ಟಿಂಕರ್ ಮಂಜಣ್ಣ, ಅತಿಥ್ ಅಂಬರಕರ್, ನವೀನ, ಪ್ರವೀಣ, ಸಚಿನ್ ವರ್ಣೇಕರ್, ಕಿಶೋ ನಂದಕುಮಾರ, ಪಿ.ಕೆ.ರಾಜೇಶ್ವರಿ ಇತರರು ಇದ್ದರು.
ಕಾಂಗ್ರೆಸ್‌ಗೆ ದೇಶಕಿಂತ ದೇಶದ್ರೋಹಿಗಳೇ ಮೆಚ್ಚು: ಎಂ.ಪಿ.ರೇಣುಕಾಚಾರ್ಯ ಖಂಡನೆ
ಹೊನ್ನಾಳಿ: ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಸಿಕೊಳ್ಳುವ ವಿಧಾನಸೌಧದಲ್ಲಿ ರಾಜ್ಯಸಭಾ ಅಭ್ಯರ್ಥಿ ನಾಸೀರ್ ಹುಸೇನ್ ಪರ ಬೆಂಬಲಿಗನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂಬ ರಾಷ್ಟ್ರದ್ರೋಹದ ಘೋಷಣೆ ಕೂಗಿರುವುದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಡಿದ ಅವರು, ರಾಜ್ಯಸಭಾ ಫಲಿತಾಂಶದ ನಂತರ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಅವರು ಗೆದ್ದ ನಂತರ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನಾಸೀರ್ ಹುಸೇನ್ ಪಕ್ಕದಲ್ಲೇ ಇದ್ದ ಬೆಂಬಲಿಗನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ದೇಶ ವಿರೋಧಿ ಘೋಷಣೆ ಕೂಗಿರುವುದು ನಿಜಕ್ಕೂ ಖಂಡನಿಯ ಹಾಗೂ ಕೆಲ ಕಾಂಗ್ರೆಸ್ ಕಾರ್ಯಕರ್ತರ ವಿಕೃತ ಮನಸ್ಸು ಹೇಗಿರುತ್ತದೆ ಎಂಬುದು ನೆನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪ್ರಕಟವಾಗಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಶೀಘ್ರವೇ ಪಾಕಿಸ್ತಾನ ಜಿಂದಾಬಾದ್ ಎಂಬ ರಾಷ್ಟ್ರವಿರೋಧಿ ಘೋಷಣೆ ಕೂಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸ್ವತಃ ಕಾಂಗ್ರೆಸ್‍ನ ಮುಖಂಡರೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಬೇಕಾಯಿತು. ಆದರೆ, ಈವರೆವಿಗೂ ಸರ್ಕಾರ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಸರ್ಕಾರದ ಮನಸ್ಥಿತಿ ಏನೆಂಬುದು ಇಡೀ ನಾಡಿಗೇ ಗೊತ್ತಾಗಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಇನ್ನು, ಕನಿಷ್ಠ ಆರೋಪಿಯ ವಿರುದ್ಧ ಎಫ್‍ಐಆರ್ ದಾಖಲಿಸಿಲ್ಲ ಎಂದರೆ ಕಾಂಗ್ರೆಸ್ ಸರ್ಕಾರಕ್ಕೆ ದೇಶಕಿಂತ ದೇಶದ್ರೋಹ ಹೇಳಿಕೆ ನೀಡುವ ದೇಶದ್ರೋಹಿಗಳೇ ಅವರಿಗೆ ಹೆಚ್ಚು ಎನಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.