ರಾಮನಗರ: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಭಾರತ ಸಂವಿಧಾನ ಗಟ್ಟಿಯಾಗಿದೆ. ಅದರ ನೆರಳಿನಲ್ಲಿ ಬದುಕು ಕಟ್ಟಿಕೊಂಡಿರುವ ಮತಾಂಧರರು ಸಂವಿಧಾನ ಬದಲಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎನ್.ನರಸಿಂಹಯ್ಯ ಕಿಡಿಕಾರಿದರು
ರಾಮನಗರ: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಭಾರತ ಸಂವಿಧಾನ ಗಟ್ಟಿಯಾಗಿದೆ. ಅದರ ನೆರಳಿನಲ್ಲಿ ಬದುಕು ಕಟ್ಟಿಕೊಂಡಿರುವ ಮತಾಂಧರರು ಸಂವಿಧಾನ ಬದಲಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎನ್.ನರಸಿಂಹಯ್ಯ ಕಿಡಿಕಾರಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗ ಕೇಂದ್ರದಲ್ಲಿ ಮತಾಂಧರರ ಕೈಗೆ ಅಧಿಕಾರ ಸಿಕ್ಕಿದೆ. ಸಂವಿಧಾನಕ್ಕೆ ಗೌರವ ಕೊಟ್ಟು ಸಂರಕ್ಷಿಸಬೇಕಾದ ಆ ಜನಪ್ರತಿನಿಧಿಗಳೇ ಸಂವಿಧಾನ ಬದಲಿಸುವ ಮಾತನ್ನಾಡಿ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವಾಗ ಕಾಂಗ್ರೆಸ್ ಪಕ್ಷ ಎಚ್ಚರಿಕೆ ವಹಿಸಬೇಕಿದೆ. ನಮ್ಮ ಮುಖಂಡರಲ್ಲಿ ಗೊಂದಲ ಬೇಡ, ನಾವೆಲ್ಲರೂ ಒಟ್ಟಾಗಿ ಸಂವಿಧಾನ ವಿರೋಧಿಗಳಿಗೆ ತಕ್ಕಪಾಠ ಕಲಿಸುವ ಮೂಲಕ ಸಂವಿಧಾನವನ್ನು ರಕ್ಷಣೆ ಮಾಡುವ ಸಂಕಲ್ಪ ಮಾಡಬೇಕಿದೆ ಎಂದು ನರಸಿಂಹಯ್ಯ ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಾಣ್ಣುಡಿಯಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಅಪಾರ ಪಾಂಡಿತ್ಯ ಹೊಂದಿದ್ದ ಮಹಾನ್ ಮಾನವತವಾದಿಯಾಗಿದ್ದರು. ಸಂವಿಧಾನ ಬದಲಿಸಲು ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ನಾವು ಧ್ವನಿ ಎತ್ತಬೇಕಿದೆ ಎಂದರು.
ಅಂಬೇಡ್ಕರ್ ಅವರ ಕೊಡುಗೆಗಳು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದಷ್ಟೆ ಅಲ್ಲ, ಜನರು ಜಾತಿ ಧರ್ಮವನ್ನು ಮೀರಿ ಉತ್ತಮ ರೀತಿಯಲ್ಲಿ ಬದುಕುವ ಪಾಠವನ್ನು ಕಟ್ಟಿಕೊಡುತ್ತದೆ. ಜಯಂತಿಗಳು ಕೇವಲ ಸರಳವಾಗಿ ಆಚರಣೆ ಮಾಡುತ್ತಿದ್ದು, ಅರ್ಥಪೂರ್ಣ ವಾಗಿ ಆಚರಿಸುವ ಅಗತ್ಯವಿದೆ. ಅವು ಒಂದು ಜಾತಿಗೆ ಸೀಮಿತವಾಗದೆ, ಜಾತಿಯನ್ನು ಮೀರಿ ಜಯಂತಿಗಳು ನಡೆಯಬೇಕು ಎಂದು ಹೇಳಿದರು.ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್.ರಾಜು ಮಾತನಾಡಿ, ಅಂಬೇಡ್ಕರ್ ಅವರು ಕಾನೂನು ಮಂತ್ರಿಯಾಗಿ, ಎಲ್ಲರಿಗೂ ಸಮಾನತೆಯ ಹಕ್ಕು ಕೊಟ್ಟವರು. ಅವರು ಕೊಟ್ಟ ಸಂವಿಧಾನದ ನಮ್ಮ ಬದುಕಿನ ದಾರಿದೀಪವಾಗಿದೆ ಎಂದು ಅವರ ಕೊಡುಗೆಗಳನ್ನು ಸ್ಮರಿಸಿದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೇಹಳ್ಳಿ ಗಂಗಾಧರ್, ಮಾಜಿ ಅಧ್ಯಕ್ಷ ಜಯಣ್ಣ, ನಗರಸಭೆ ಮಾಜಿ ಅಧ್ಯಕ್ಷ ರವಿಕುಮಾರ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ತಾಲೂಕು ಅಧ್ಯಕ್ಷ ದೇವರಾಜು, ಕಾಂಗ್ರೆಸ್ ಸೇವಾ ದಳ ಜಿಲ್ಲಾಧ್ಯಕ್ಷ ಚಂದ್ರಮೋಹನ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕೆಡಿಪಿ ಸದಸ್ಯ ಪುಟ್ಟಣ್ಣ, ಮುಖಂಡರಾದ ಶಿವಶಂಕರ್, ಶ್ರೀನಿವಾಸ್, ಬನ್ನಿಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಹೇಮಂತ್, ಜಿಲ್ಲಾ ಕಾಂಗ್ರೆಸ್ ಕಚೇರಿ ಸಹಾಯಕ ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.ಕೋಟ್ ...........
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸಿದಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ. ಸಮಾಜದಲ್ಲಿದ್ದ ಸಾಮಾಜಿಕ ಸಮಾನತೆ, ಅಶೃಸ್ಯತೆ ನಿರ್ಮೂಲನೆ, ಮಹಿಳಾ ಮೀಸಲಾತಿ, ಕಾರ್ಮಿಕ ಹಕ್ಕುಗಳು, ಶಿಕ್ಷಣ, ಸಂಘಟನೆ ಸೇರಿದಂತೆ ಅಂಬೇಡ್ಕರ್ ಕೊಟ್ಟ ಹಲವು ಕೊಡುಗೆಗಳು ನಮ್ಮಗಳ ಜೀವನಕ್ಕೆ ದಾರಿದೀಪ.- ಎನ್.ನರಸಿಂಹಯ್ಯ, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ, ಬೆಂ.ದಕ್ಷಿಣ
14ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಆಚರಿಸಲಾಯಿತು.