ಸಾರಾಂಶ
ಘಟನೆಯಿಂದ ವಿಜಯ್ ತಲೆ, ಕಾಲು ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ. ವಿಜಯ್ ಅವರ ಮೃತದೇಹವನ್ನು ಸೋಮವಾರ ಮಧ್ಯಾಹ್ನ ತಾಲೂಕಿನ ಅಲ್ಲಾಪಟ್ಟಣ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಬೈಕ್ ಅಪಘಾತದಲ್ಲಿ ನವ ವಿವಾಹಿತ ಯುವಕನೊಬ್ಬ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಕಾಳೇಗೌಡರ ಪುತ್ರ ವಿಜಯ್ (28) ಮೃತ ಯುವಕ. ನೆಲಮನೆ ಗ್ರಾಮದ ಅಶ್ವತ್ಥ್ ಅವರ ಪುತ್ರಿ ರಕ್ಷಿತಾ (20) ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವತಿ. ವಿಜಯ್ ಜೊತೆ ರಕ್ಷಿತಾ ವಿವಾಹ ಕಳೆದ 11 ದಿನಗಳ ಹಿಂದೆ ನಡೆದಿತ್ತು. ನವ ದಂಪತಿ ಪ್ರವಾಸಕ್ಕೆಂದು ಭಾನುವಾರ ತಮ್ಮ ಬೈಕ್ ಮೂಲಕ ಶಿಂಷಾಗೆ ತೆರಳಿ ಹಿಂತಿರುಗುವಾಗ ಕೊಡಗಳ್ಳಿ ಗ್ರಾಮದ ಬಳಿ ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿತ್ತು. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯಿಂದ ವಿಜಯ್ ತಲೆ, ಕಾಲು ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರ ಗಾಯವಾಗಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಮೃತಪಟ್ಟಿದ್ದಾರೆ. ವಿಜಯ್ ಅವರ ಮೃತದೇಹವನ್ನು ಸೋಮವಾರ ಮಧ್ಯಾಹ್ನ ತಾಲೂಕಿನ ಅಲ್ಲಾಪಟ್ಟಣ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಪತ್ನಿ ರಕ್ಷಿತಾ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.