11 ವರ್ಷಗಳ ಹಿಂದೆ ನಡೆದ ಪಾದಚಾರಿ - ಬೈಕ್ ಅಪಘಾತ ಪ್ರಕರಣದಲ್ಲಿ ಬೈಕ್ ಸವಾರ ಆಶಿಕ್ ಎಂಬಾತ ದೋಷಿ ಎಂದು ಸಾಬೀತಾಗಿ 20 ಲಕ್ಷ ರು. ಪರಿಹಾರವಾಗಿ ನೀಡುವಂತೆ ಸಜೆ ವಿಧಿಸಲ್ಪಟ್ಟಿದ್ದು, ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ.
ಉಡುಪಿ: ಇಲ್ಲಿನ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಮತ್ತು ಯುವತಿ ಮೇಲೆ ಪೊಲೀಸರು ಹಲ್ಲೆ ಪ್ರಕರಣಗಳನ್ನು ಸಿಐಡಿಗೆ ಒಪ್ಪಿಸಲಾಗಿದೆ.
11 ವರ್ಷಗಳ ಹಿಂದೆ ನಡೆದ ಪಾದಚಾರಿ - ಬೈಕ್ ಅಪಘಾತ ಪ್ರಕರಣದಲ್ಲಿ ಬೈಕ್ ಸವಾರ ಆಶಿಕ್ ಎಂಬಾತ ದೋಷಿ ಎಂದು ಸಾಬೀತಾಗಿ 20 ಲಕ್ಷ ರು. ಯನ್ನು ಪರಿಹಾರವಾಗಿ ನೀಡುವಂತೆ ಸಜೆ ವಿಧಿಸಲ್ಪಟ್ಟಿದ್ದು, ಆತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ, ಡಿ. 17ರಂದು ಮುಂಜಾನೆ ಆತನಿಗೆ ವಾರೆಂಟು ಜಾರಿ ಮಾಡಲು ಪೊಲೀಸರು ಆತನ ಅಜ್ಜಿ ಮನೆಗೆ ತೆರಳಿದ್ದರು. ಆಗ ಮನೆಯಲ್ಲಿದ್ದ ಇಬ್ಬರು ಮಹಿಳೆಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದರು ಎಂದು ಪ್ರಕರಣ ದಾಖಲಿಸಲಾಗಿತ್ತು.ಇದೇ ಘಟನೆಗೆ ಸಂಬಂಧಪಟ್ಟಂತೆ ಆ ಮನೆಯ ಯುವತಿ ಅಕ್ಷತಾ ಪೂಜಾರಿ ಪೊಲೀಸರು ಬಲವಂತವಾಗಿ ಮನೆಯೊಳಗೆ ನುಗ್ಗಿ ತನ್ನ ಮತ್ತು ತಾಯಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆಕೆಗೆ ಬೆಂಬಲವಾಗಿ ಬಿಲ್ಲವ ಸಂಘಟನೆಗಳು ಬ್ರಹ್ಮಾವರ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದವು.
3 ಪೊಲೀಸರಿಗೆ ರಜೆಇದೀಗ ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಎಸ್ಪಿ ಹರಿರಾಮ್ ಶಂಕರ್ ಅವರು ಎರಡೂ ಪ್ರಕರಣಗಳ ತನಿಖೆಯನ್ನು ಬ್ರಹ್ಮಾವರ ಠಾಣೆಯಿಂದ ಮಣಿಪಾಲ ಠಾಣೆಗೆ ವರ್ಗಾಯಿಸಿ, ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿರುವ ಮೂವರು ಪೊಲೀಸರನ್ನು ರಜೆ ಮೇಲೆ ಕಳುಹಿಸಿದ್ದಾರೆ.
ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದು, ಇದೀಗ ಎರಡೂ ಪ್ರಕರಣಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಿಐಡಿಗೆ ಹಸ್ತಾಂತರಿಸಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.