ಸಾರಾಂಶ
ಕಡೂರು: ಕಾರು ಹಾಗೂ ಬೈಕ್‌ನ ನಡುವೆ ನಡೆದ ಭೀಕರ ಅಫಘಾತದಲ್ಲಿ ಕರ್ತವ್ಯಕ್ಕೆ ಹಾಜರಾಗಲು ತೆರಳುತಿದ್ದ ಪೋಲೀಸ್ ಪೇದೆ ಓರ್ವರು ಸ್ಥಳದಲ್ಲೇ ಮತಪಟ್ಟಿರುವ ಘಟನೆ ನಡೆದಿದೆ.
ಕಡೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ತಾಲೂಕಿನ ಜಿ.ತಿಮ್ಮಾಪುರ ಗ್ರಾಮದ ಸಿ.ಎನ್.ಮಲ್ಲಿಕಾರ್ಜುನ (44) ಮೃತಪಟ್ಟಿರುವ ಪೇದೆಯಾಗಿದ್ದಾರೆ.ಕಳೆದ ಮಂಗಳವಾರ ಸಂಜೆ 6.30ರ ಸಮಯದಲ್ಲಿ ಕಡೂರು ಠಾಣೆ ಎಚ್.ಸಿ-306 ಮಲ್ಲಿಕಾರ್ಜುನ್.ಸಿ.ಎನ್ ಠಾಣಾ ಕರ್ತವ್ಯ ಮುಗಿಸಿಕೊಂಡು, ಚುನಾವಣಾ ಚೆಕ್‌ಪೋಸ್ಟ್ ಲಿಂಗ್ಲಾಪುರ ಗೇಟ್ ಬಸವನದಿಬ್ಬಗೆ ಹೋಗಲೆಂದು ತಂಗಲಿ ವಿಎಲ್ ನಗರದ ಸಮೀಪ ಫ್ಲೈಓವರ್ ಅಂಡರ್ ಪಾಸ್ ಕಡೆಯಿಂದ ಕೆಎ-66-ಹೆಚ್-5222 ಬೈಕ್‌ನಲ್ಲಿ ಸರ್ವಿಸ್ ರಸ್ತೆಯಲ್ಲಿ ಬೆಂಗಳೂರು ಕಡೆಗೆ ತೆರಳುವಾಗ, ಮುರುಳಿಕೃಷ್ಣ ಕೆಎ-11-ಪಿ-1274 ಸ್ಕೋಡಾ ಕಾರಿ ಅತಿವೇಗವಾಗಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಲ್ಲಿಕಾರ್ಜುನ್ ತಲೆಗೆ ತೀವ್ರವಾಗಿ ಪೆಟ್ಟಾಗಿ, ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟ ಘಟನೆ ತಿಳಿಯುತಿದ್ದಂತೆ ನೂರಾರು ಜನ ಕಡೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿ ಜಮಾಯಿಸಿದರು. ಶಾಸಕ ಕೆ.ಎಸ್.ಆನಂದ್, ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಕೂಡ ಆಗಮಿಸಿ ಪತ್ನಿ ಆಶಾ, ಮಗಳು ಚಿನ್ಮಯಿ ಮಗ ನಿತಿನ್ ಸೇರಿದಂತೆ ಕುಟುಂಬಸ್ಥರಿಗೆ ಸಮಾಧಾನ ಹೇಳಿದರು.ಬುಧವಾರ ಜಿಲ್ಲಾ ವರಿಷ್ಟಾಧಿಕಾರಿ ವಿಕ್ರಂ ಆಮಟೆ, ಡಿವೈಎಸ್ಪಿ ಮತ್ತಿತರರು ಭೇಟಿ ನೀಡಿ ಮನೆ ಮುಂದೆ ಪಾರ್ಥಿವ ಶರೀರದ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು. ಪೋಲೀಸ್ ಇಲಾಖೆಯಿಂದ ಸರ್ಕಾರಿ ಗೌರವದ ಜೊತೆ ಕುಶಾಲು ತೋಪು ಹಾರಿಸುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು. ಇಲಾಖೆಯಲ್ಲಿ 22 ವರ್ಷ ಕೆಲಸ ಮಾಡಿ ಉತ್ತಮ ಹೆಸರು ಪಡೆದಿದ್ದರು. ಆನಂತರ ಕಡೂರು ಪಟ್ಟಣದಾದ್ಯಂತ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದ ಬಳಿಕ ಕಡೂರಿನ ಚಂದ್ರಮೌಳೇಶ್ವರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.