ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಮಹಿಳಾ ದಿನಾಚರಣೆ ಪ್ರಯುಕ್ತ ಸ್ನೇಹ ಮನೋ ವಿಕಾಸ ಕೇಂದ್ರ, ರೋಟರಿ ನಾಗರಬಾವಿ, ಬೆಂಗಳೂರು, ಶ್ರೀಆಟೋ ಮೋಟರ್, ಐಎಂಎ ಹಾಗೂ ಡಬ್ಲ್ಯುಡಿಡಬ್ಲ್ಯು ವತಿಯಿಂದ ಮಾನಸಿಕ ಆರೋಗ್ಯ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು.ಭೀಮಸಂದ್ರದಲ್ಲಿ ಐಎಂಎ ಅಧ್ಯಕ್ಷ ಡಾ.ಎಚ್.ವಿ. ರಂಗಸ್ವಾಮಿ ಅವರು ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಎಸ್.ಎಸ್. ಪುರಂನಲ್ಲಿರುವ ಸ್ನೇಹ ಮನೋವಿಕಾಸ ಕೇಂದ್ರದ ಮುಂಭಾಗದಲ್ಲಿ ಪತ್ರಕರ್ತ ಟಿ.ಎನ್. ಮಧುಕರ್ ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿಸಿದರು. ನಗರದ ಎಸ್.ಎಸ್.ಪುರಂನಲ್ಲಿರುವ ಸ್ನೇಹ ಮನೋವಿಕಾಸ ಕೇಂದ್ರದ ಮುಂಭಾಗದಲ್ಲಿ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಪತ್ರಕರ್ತ ಟಿ.ಎನ್. ಮಧುಕರ್, ಜೀವ ಅತ್ಯಮೂಲ್ಯ. ಹಾಗಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಹಾಗೂ ಮೊಬೈಲ್‌ನಲ್ಲಿ ಮಾತನಾಡಬಾರದು. ಇದರೊಂದಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಮಾನಸಿಕ ಆರೋಗ್ಯದ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ಯಾವುದೇ ರೀತಿಯ ಒತ್ತಡಗಳಿಗೆ ಒಳಗಾಗದೆ ಮಾನಸಿಕ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು. ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಮಾನಸಿಕ ಆರೋಗ್ಯ ಕುರಿತ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿರುವ ಬೈಕ್ ಜಾಥಾದಲ್ಲಿ ಸಾವಿರ ಬೈಕ್‌ಗಳು ಪಾಲ್ಗೊಳ್ಳ ಬೇಕು. ಈ ನಿಟ್ಟಿನಲ್ಲಿ ನಾವು ಸಹ ಕೈಜೋಡಿಸುತ್ತೇವೆ. ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 3 ಗಣ್ಯರನ್ನು ಗೌರವಿಸಲಾಗಿದೆ. ಮುಂದಿನ ದಿನಗಳಲ್ಲಿ 100 ಜನ ಸಾಧಕರನ್ನು ಸನ್ಮಾನಿಸುವಂತಾಗಬೇಕು ಎಂದು ಅವರು ಹೇಳಿದರು.ಸ್ನೇಹ ಮನೋವಿಕಾಸ ಕೇಂದ್ರದ ಮುಖ್ಯಸ್ಥರಾದ ರೋಟರಿ ನಾಗರಬಾವಿ ಅಧ್ಯಕ್ಷೆ ಡಾ.ಪದ್ಮಾಕ್ಷಿ ಲೋಕೇಶ್ ಮಾತನಾಡಿ, ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಬೈಕ್ ಜಾಥಾ ನಡೆಸಲಾಗಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ತಮ್ಮ ತಲೆಬುರುಡೆ ಸಂರಕ್ಷಿಸಿಕೊಳ್ಳಬೇಕು. ಹಾಗೆಯೇ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ ಎಂದರು.ಹೆಣ್ಣು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಿದೆ. ಹೆಣ್ಣು ಮಕ್ಕಳ ಹಾರ್ಮೋನ್‌ಗಳಲ್ಲಿ ಆಗುವ ಬದಲಾ ವಣೆಯಿಂದ ಒಮ್ಮೊಮ್ಮೆ ಬೇಸರಗೊಳ್ಳುತ್ತಾರೆ. ಆಗ ಮಾನಸಿಕ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಹೆಣ್ಣು ಮಕ್ಕಳ ಜತೆ ಗಂಡು ಮಕ್ಕಳ ಮಾನಸಿಕ ಆರೋಗ್ಯವೂ ಸಹ ಅಷ್ಟೇ ಮುಖ್ಯವಾಗಿದೆ. ಹಾಗಾಗಿ ನನ್ನ ಮಾನಸಿಕ ಆರೋಗ್ಯಕ್ಕೆ ನಾನು ಗಮನ ಕೊಡುತ್ತೇನೆ ಎಂದು ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.ಈ ಸಂದರ್ಭದಲ್ಲಿ ಆನಿ ಅಮೃತ, ಆಶಾ ಕೆ.ಎಸ್., ಮಾಧವಿ ಜೈನ್, ಮಧುಕರ್ ಕೆ.ಎನ್. ಸ್ನೇಹ ಮನೋವಿಕಾಸ ಕೇಂದ್ರದ ಸಿಬ್ಬಂದಿ. ರವಿಕುಮಾರ್, ಡಾ. ಲೋಕೇಶ್‌ಬಾಬು, ಡಾ. ಪದ್ಮಾಕ್ಷಿ ಲೋಕೇಶ್, ಮಾಲಾ ಉನ್ನತಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ಮಾಧುರಿ, ಪ್ರಿಯಾ ಪ್ರದೀಪ್, ಆಶಾ ಕೆ.ಆರ್. ಅವರನ್ನು ಗೌರವಿಸಲಾಯಿತು.