ಸಾರಾಂಶ
ಜಾಥಾದ ಬಳಿಕ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಪಂ ಇಒ ಎಸ್. ವೆಂಕಟಾಚಲಪತಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಅಂಗವಾಗಿ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಮೂಡುಬಿದಿರೆ ತಾಲೂಕು ಪಂಚಾಯಿತಿ, ತಾಲೂಕು ಕಚೇರಿ ಸಹಯೋಗದಲ್ಲಿ ಬೈಕ್ ಜಾಥಾಕ್ಕೆ ಶುಕ್ರವಾರ ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ್ ಎಸ್. ಮಂದಲಮನಿ, ಪೋಲಿಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಅವರ ಸಹಯೋಗದೊಂದಿಗೆ ಸಹಾಯಕ ಚುನಾವಣಾಧಿಕಾರಿ ರಾಜು ಕೆ. ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.ಬೈಕ್ ಜಾಥಾವು ಮೂಡುಬಿದಿರೆ ತಾಲೂಕು ಪಂಚಾಯಿತಿ ಆವರಣದಿಂದ ಹೊರಟು ಪುರಸಭೆ ಮುಂಭಾಗದಿಂದ ತೆರಳಿ ಸ್ವರಾಜ್ಯ ಮೈದಾನದ ಬಳಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ ಮೂಲಕ ನಿಶ್ಮಿತಾ ಟವರ್ ಮುಂಭಾಗದಿಂದ ಮೂಡುಬಿದಿರೆ ಮೂಖ್ಯ ಪೇಟೆಗೆ ತಲುಪಿ ಹನುಮಾನ್ ದೇವಸ್ಥಾನದ ಮೂಲಕ ಹಳೆ ಪೊಲೀಸ್ ಠಾಣೆಯಿಂದ ಮೆಸ್ಕಾಂ ಮೂಲಕ ತಿರುಗಿ ಅಮರಶ್ರೀ ಮೂಲಕ ಮೂಡುಬಿದಿರೆ ಬಸ್ ನಿಲ್ದಾಣಕ್ಕೆ ತೆರಳಿ ವಾಪಸ್ ತಾಲೂಕು ಪಂಚಾಯಿತಿಯಲ್ಲಿ ಸಮಾಪನಗೊಂಡಿತು.
ಜಾಥಾದ ಬಳಿಕ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಪಂ ಇಒ ಎಸ್. ವೆಂಕಟಾಚಲಪತಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬಳಿಕ ಮಾತನಾಡಿದ ಅವರು, ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ನಾವೆಲ್ಲರೂ ಬೈಕ್ ಜಾಥಾದ ಮೂಲಕ ಮಾಹಿತಿ ನೀಡುವ ಪ್ರಯತ್ನವನ್ನು ಮಾಡಿದ್ದೇವೆ. ಎಲ್ಲರೂ ಏ.26ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ತಿಳಿಸಿದರು.ಬಾಕ್ಕ್ ಜಾಥಾದುದ್ದಕ್ಕೂ ಸಹಾಯಕ ನಿರ್ದೇಶಕ ಸಾಯಿಷ ಚೌಟ ಅವರು ಮತದಾನದ ಮಾಹಿತಿ ನೀಡಿದರು. ಜಾಥಾದಲ್ಲಿ ಪೊಲೀಸ್ ಸಿಬ್ಬಂದಿ, ಗ್ರಾಪಂ, ತಾಪಂ ಸಿಬ್ಬಂದಿ ವರ್ಗ, ಗ್ರಾಪಂ ಸ್ವಚ್ಛತಾ ವಾಹನಗಳು ಪಾಲ್ಗೊಂಡಿದ್ದವು. ಕಾರ್ಯಕ್ರಮವನ್ನು ಸಹಾಯಕ ನಿರ್ದೇಶಕ ಸಾಯಿಷ್ ಚೌಟ ನಿರೂಪಿಸಿದರು. ಜಾಥಾದಲ್ಲಿ ಶ್ವೇತವರ್ಣದ ವಸ್ತ್ರಗಳನ್ನು ತೊಟ್ಟ ಸಿಬ್ಬಂದಿ ಗಮನ ಸೆಳೆದರು.