ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಚುನಾವಣೆಯ ಸಂದರ್ಭದಲ್ಲಿ ಕೋವಿಗಳನ್ನು ಠೇವಣಿ ಇಡುವ ವಿಚಾರದಲ್ಲಿ ಚುನಾವಣಾ ಆಯೋಗದ ಸೂಚನೆ ಸ್ಪಷ್ಟವಾಗಿದ್ದರೂ ಜಿಲ್ಲಾಡಳಿತ ಮತ್ತು ಸ್ಕ್ರೀನಿಂಗ್ ಕಮಿಟಿ ರೈತರನ್ನು ಗುಲಾಮರನ್ನಾಗಿ ಮಾಡುತ್ತಿದೆ. ಜೊತೆಗೆ ಚುನಾವಣಾ ಆಯೋಗದ ಆದೇಶವನ್ನು ದುರಪಯೋಗ ಪಡಿಸುತ್ತಿದೆ ಎಂದು ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಆರೋಪಿಸಿದ್ದಾರೆ.ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಕೋವಿ ಠೇವಣಾತಿಯ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗ ೨೦೦೯ರಲ್ಲಿ ಠೇವಣಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡಿದೆ. ಅದರಂತೆ ರೈತರು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ವಿನಾಯಿತಿ ನೀಡುವಂತೆ ಮೂರು ಬಾರಿ ಜಿಲ್ಲಾಡಳಿತ ಹಾಗೂ ಸ್ಕ್ರೀನಿಂಗ್ ಕಮಿಟಿಯನ್ನು ಭೇಟಿ ಮಾಡಿದ್ದರೂ, ಯಾವುದೇ ವಿನಾಯಿತಿಗೆ ಅವಕಾಶ ಇಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಕೃಷಿಕರಿಗೆ ಠೇವಣಾತಿಯಿಂದ ವಿನಾಯಿತಿ ಸಿಗದೇ ಹೋದರೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗುವುದು. ಕೋವಿಯನ್ನು ಮನೆಗೆ ತಂದುಕೊಡಬೇಕೆಂದು ನೋಟಿಸ್ ನೀಡುವ ಜೊತೆಗೆ ಈ ವ್ಯವಸ್ಥೆ ಮಾಡದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಕೋವಿ ಠೇವಣಿಯ ಸಂದರ್ಭದಲ್ಲಿ ಆಗಿರುವ ನಷ್ಟವನ್ನು ರೈತರಿಗೆ ಅಧಿಕಾರಿಗಳ ಕೈಯಿಂದ ವಸೂಲಿಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದರು.
ಪ್ರಗತಿಪರ ಕೃಷಿಕ ಎಂ. ಗೋವಿಂದ ಭಟ್ ಮಾಣಿಮೂಲೆ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘಗಳ ಒಕ್ಕೂಟದ ಸದಸ್ಯ ಸ್ಟೀವನ್ ಡಿಸೋಜ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಇದ್ದರು.