ಹೇಮಾವತಿ ಜಲಾಶಯದಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ತಾಲೂಕಿನ ಕೆಲವು ಭಾಗಗಳಿಗೆ ನೀರು ಒದಗಿಸುವ ಎ.ಜೆ.ರಾಮಚಂದ್ರಾವ್ ನಾಲೆ 1200 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿವೆ. ನಿರಂತರವಾಗಿ 10 ದಿನಗಳ ಕಾಲ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಿ ಬಿರು ಬೇಸಿಗೆಯಲ್ಲಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಆಗ್ರಹಿಸಿ, ನಾಲೆ ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್‍ಯಾಲಿ ನಡೆಸಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಪ್ರತಿಭಟಿಸಿಲು ನಾಗಮಂಗಲಕ್ಕೆ ತೆರಳಿದರು.ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಪಟ್ಟಣದ ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಎಂಜಿನಿಯರುಗಳ ವಿರುದ್ಧ ಧಿಕ್ಕಾರ ಕೂಗಿದ ಹೋರಾಟಗಾರರು, ಹೇಮಾವತಿ ಎಡದಂಡೆ ನಾಲಾ ಅಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಸಾವಿರಾರು ಕೋಟಿ ರು.ಗಳ ಅಕ್ರಮಗಳ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಹೇಮಾವತಿ ಕಚೇರಿ ಎದುರು ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 19 ಟಿಎಂಸಿ ನೀರಿನ ಸಂಗ್ರಹವಿದೆ. ಕೂಡಲೇ ತಾಲೂಕು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಹೇಮಾವತಿ ಜಲಾಶಯದಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ತಾಲೂಕಿನ ಕೆಲವು ಭಾಗಗಳಿಗೆ ನೀರು ಒದಗಿಸುವ ಎ.ಜೆ.ರಾಮಚಂದ್ರಾವ್ ನಾಲೆ 1200 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿವೆ. ನಿರಂತರವಾಗಿ 10 ದಿನಗಳ ಕಾಲ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಿ ಬಿರು ಬೇಸಿಗೆಯಲ್ಲಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ನಾಲೆಗಳಿಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಯಾಗಿ ಬೋರ್ ವೆಲ್ ಆಧಾರಿತ ಕೃಷಿಕರಿಗೂ ಅನುಕೂಲವಾಗುತ್ತದೆ. ಸರ್ಕಾರ ನೀರು ಹರಿಸದೆ ರೈತರ ಬಗ್ಗೆ ಮಲತಾಯಿ ಧೋರಣೆ ಪ್ರದಶಿಸುತ್ತಿದೆ. ಈ ಎಲ್ಲೆಯ ಯಾವುದೇ ಶಾಸಕರೂ ಹೇಮಾವತಿ ಪ್ರದೇಶದ ರೈತರ ಹಿತರಕ್ಷಣೆಗೆ ಯಾವತ್ತೂ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೇಮಾವತಿ ಎಡದಂಡೆ ನಾಲೆಯ ಈ ಹಿಂದೆ ನಡೆದ ಆಧುನೀಕರಣ ಕಾಮಗಾರಿಯಲ್ಲಿ ಸಾವಿರಾರು ಕೋಟಿ ರು.ಗಳ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ನಾಲಾ ಏರಿಗಳ ಮೇಲೆ ನಿಯಮಾನುಸಾರ ರಕ್ಷಣಾ ಕಲ್ಲುಗಳು, ಗಡಿ ಕಲ್ಲುಗಳು, ಮಳೆಯ ನೀರು ಕಾಲುವೆಗೆ ಬೀಳದಂತೆ ತೋಡಬೇಕಾದ ಡ್ರೈನ್, ಗ್ರಾವೆಲ್ ಮಣ್ಣು ಬಳಕೆ ಮಾಡದಿರುವುದು, ಗಾಡಿ ಸೇತುವೆಗಳನ್ನು ಕಟ್ಟದಿರುವುದು, ಸೇವಾ ರಸ್ತೆಗಳಿಗೆ ಕಾಂಕ್ರೀಟ್ ಹಾಕದಿರುವುದು, ಕಳಪೆ ಲೈನಿಂಗ್ ಮುಂತಾದ ಹತ್ತು ಹಲವಾರು ಕಾಮಗಾರಿಗಳನ್ನು ಮಾಡದೇ ಸುಮಾರು 500 ಕೋಟಿಗೂ ಅಧಿಕ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು.
ಭ್ರಷ್ಟರ ವಿರುದ್ಧ ಸಿಎಂಗಳಿಗೆ ದೂರು ನೀಡಿದರೂ ಭ್ರಷ್ಟ ಎಂಜಿನಿಯರ್ ಮತ್ತು ಗುತ್ತಿಗೆದಾರರ ರಕ್ಷಣೆ ಮಾಡಿದ್ದಾರೆ. ಕೂಡಲೇ ಹೇಮಾವತಿ ನಾಲಾ ಅಧುನೀಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಭ್ರಷ್ಟರಿಗೆ ಶಿಕ್ಷೆಯಾಗಲು ಆಗ್ರಹಿಸಲು ರೈತರು ಎಡದಂತೆ ನಾಲೆ ಉದ್ದಕ್ಕೂ ಬೈಕ್ ರ್‍ಯಾಲಿಯಲ್ಲಿ ತೆರಳಿ ಜನಜಾಗೃತಿ ಮೂಡಿಸಿ ನಾಗಮಂಗಲಕ್ಕೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಶವ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಹಿರೀಕಳಲೆ ಬಸವರಾಜು, ಕೃಷ್ಣಾಪುರ ರಾಜಣ್ಣ, ಕರೋಟಿ ತಮ್ಮಯ್ಯ, ಹೊನ್ನೇಗೌಡ, ಬೂಕನಕೆರೆ ನಾಗರಾಜು ಸೇರಿದಂತೆ ಹಲವರಿದ್ದರು.