ಬೇಲೆಕೇರಿಯಲ್ಲಿ ಆತಂಕ ಹುಟ್ಟಿಸಿದ ಅಪ್ರಾಪ್ತರ ಬೈಕ್ ಸವಾರಿ

| Published : Oct 14 2024, 01:19 AM IST

ಬೇಲೆಕೇರಿಯಲ್ಲಿ ಆತಂಕ ಹುಟ್ಟಿಸಿದ ಅಪ್ರಾಪ್ತರ ಬೈಕ್ ಸವಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ಞಾವಂತ ನಾಗರಿಕರು ವಾಹನ ಚಾಲನೆ ಮಾಡುವ ಮಕ್ಕಳ, ವಾಹನ ಸಹಿತ ನಂಬರ್ ಕಾಣುವ ರೀತಿಯಲ್ಲಿ ಫೋಟೋ ಅಥವಾ ವಿಡಿಯೋ ಮಾಡಿ 7259831070 ಅಥವಾ 8277988366 ನಂಬರಿಗೆ ಕಳುಹಿಸುವಂತೆ ವಿನಂತಿಸಿದೆ.

ರಾಘು ಕಾಕರಮಠ

ಅಂಕೋಲಾ: ತಾಲೂಕಿನ ಬೇಲೆಕೇರಿ ಗ್ರಾಮದಲ್ಲಿ ಅಪ್ರಾಪ್ತರು ದ್ವಿ-ಚಕ್ರ ವಾಹನಗಳನ್ನು ಅತಿ ವೇಗದಲ್ಲಿ ಚಲಾಯಿಸುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕ ಹುಟ್ಟಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಈಗ ಮುಂದಾಗಿದೆ.

ತಾಲೂಕು ಕೇಂದ್ರದಿಂದ 8 ಕಿಮೀ ಅಂತರದಲ್ಲಿರುವ ಬೇಲೆಕೇರಿ ರಸ್ತೆಯಲ್ಲಿ ನೀವು ಓಡಾಡಬೇಕೆಂದರೆ ನಿಮಗೆ ಡಬಲ್ ಗುಂಡಿಗೆ ಇರಬೇಕು. ಏಕೆಂದರೆ ಧೂಮ್ ಚಲನಚಿತ್ರದ ಶೈಲಿಯಲ್ಲಿ ವಿಕೃತ ಕೇಶ ವಿನ್ಯಾಸ, ಉಡುಗೆ ತೊಡುಗೆಗಳೊಂದಿಗೆ ಇಲ್ಲಿನ ಪಡ್ಡೆ ಹೈಕಳು ಅಸಂಬದ್ಧವಾಗಿ ಕೇಕೆ ಹಾಕುತ್ತ, ಕರ್ಕಶ ಸೈಲೆನ್ಸರ್ ಅಳವಡಿಸಿಕೊಂಡು, ಅತಿ ವೇಗದಲ್ಲಿ ಬೈಕ್ ಚಲಾಯಿಸುತ್ತ, ಎದುರಿಗೆ ಬರುವ ಸವಾರರ ಎದೆ ನಡುಗುವಂತೆ ಮಾಡುತ್ತಾರೆ. ಪೊಲೀಸ್ ಇಲಾಖೆಗೂ ಇದು ತಲೆನೋವಾಗಿ ಪರಿಣಮಿಸಿದೆ.

ಜಾಗೃತಿಗೆ ಮುಂದಾದ ಖಾಕಿ: ಬೇಲೆಕೇರಿಯಲ್ಲಿ ಈ ಪಡ್ಡೆ ಬೈಕ್ ಸವಾರರ ಕಾಟಕ್ಕೆ ಬೇಸತ್ತ ನಾಗರಿಕರು ಪೊಲೀಸ್ ಇಲಾಖೆಯ ಸಹಾಯ ಯಾಚಿಸಿದ್ದಾರೆ. ಸಂಚಾರ ಪಿಎಸ್‌ಐ ಸುನೀಲ ಹುಳ್ಳೋಳ್ಳಿ ಹಾಗೂ ಬೇಲೆಕೇರಿ ಬೀಟ್ ಪೊಲೀಸ್ ಸಿಬ್ಬಂದಿ ಪ್ರವೀಣ ಕೊಪ್ಪಳ ಬೈಕ್‌ ಹಿಡಿದು ಪ್ರಕರಣ ದಾಖಲಿಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಪೊಲೀಸ್ ಇಲಾಖೆ, ಬೇಲೇಕೇರಿ ವ್ಯಾಪ್ತಿಯಲ್ಲಿ ಅಪ್ರಾಪ್ತರು ದ್ವಿಚಕ್ರ ವಾಹನಗಳ ಚಾಲನೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ಕೊಡುತ್ತಿರುವ ವಾಹನ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಜ್ಞಾವಂತ ನಾಗರಿಕರು ವಾಹನ ಚಾಲನೆ ಮಾಡುವ ಮಕ್ಕಳ, ವಾಹನ ಸಹಿತ ನಂಬರ್ ಕಾಣುವ ರೀತಿಯಲ್ಲಿ ಫೋಟೋ ಅಥವಾ ವಿಡಿಯೋ ಮಾಡಿ 7259831070 ಅಥವಾ 8277988366 ನಂಬರಿಗೆ ಕಳುಹಿಸುವಂತೆ ವಿನಂತಿಸಿದೆ. ಜನರಿಗೂ ಅಪಾಯ...

ಈ ಅಪ್ರಾಪ್ತರ ಅಪಾಯಕಾರಿ ಬೈಕ್ ರೈಡಿಂಗ್‌ನಿಂದ ಪಾದಚಾರಿಗಳಿಗೆ ಮತ್ತು ಸಾರ್ವಜನಿಕರ ಸುರಕ್ಷತೆಗೂ ಆತಂಕ ಎದುರಾಗಿದೆ. ಕಳೆದ ವರ್ಷ ನಡೆದ ಬೈಕ್ ಅಪಘಾತದಲ್ಲಿ ಈ ಭಾಗದ ಅಪ್ರಾಪ್ತ ಬಾಲಕನೆ ಬೈಕ್ ಚಲಾಯಿಸಿ, ಒಬ್ಬರ ಜೀವಕ್ಕೆ ಸಂಚಕಾರ ತಂದಿರುವ ಘಟನೆಯೂ ಪೊಲೀಸ್ ಪ್ರಕರಣದಲ್ಲಿ ಇದೆ.

ಕೈಜೋಡಿಸಿ: ಬೇಲೆಕೇರಿಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಯುವಕರು ಬೈಕ್ ಅತಿ ವೇಗದಲ್ಲಿ ಬೈಕ್ ಚಲಾಯಿಸುತ್ತಿರುವ ಸಾಕಷ್ಟು ದೂರುಗಳು ಬಂದಿದೆ. ಯಾವುದೇ ಕಾರಣಕ್ಕೂ ತಮ್ಮ ಅಪ್ರಾಪ್ತ ಮಕ್ಕಳ ಕೈಗೆ ಬೈಕ್‌ನ್ನು ಪಾಲಕರು ನೀಡಬಾರದು. ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿಕೊಂಡು ಬೈಕ್ ಚಾಲನೆ ಮಾಡುತ್ತಿರುವುದು ಕೂಡ ಗಮನಕ್ಕೆ ಇದೆ. ಈ ಬಗ್ಗೆ ನಾಗರಿಕರು ಸಹಕರಿಸಿ ಅವರ ಬೈಕ್ ನಂಬರ್‌ ಕಾಣುವಂತೆ ಫೋಟೋ ಅಥವಾ ವಿಡಿಯೋ ಮಾಡಿ ಕಳುಹಿಸಿ ಇಲಾಖೆಯ ಕರ್ತವ್ಯಕ್ಕೆ ಕೈಜೋಡಿಸಬೇಕು ಎಂದು ಪಿಎಸ್‌ಐ ಸುನೀಲ ಹುಳ್ಳೋಳ್ಳಿ ತಿಳಿಸಿದರು.

ಪೊಲೀಸರು ಕಟಿಬದ್ಧವಾಗಲಿ: ಬೇಲೆಕೇರಿ ಗ್ರಾಮ ಮಟ್ಟದಲ್ಲಿ ಪೊಲೀಸ್ ಪೆಟ್ರೋಲ್ ಪಡೆಯನ್ನು ಬಲಗೊಳಿಸಬೇಕು. ನಿಯಮ ಪಾಲನೆಯ ದೃಷ್ಟಿಯಿಂದ ಕಾನೂನು ಪ್ರಕ್ರಿಯೆಯನ್ನು ಕಠಿಣಗೊಳಿಸುವ ಬಗ್ಗೆ ಚಿಂತನೆ ನಡೆಸಿ, ನೆಮ್ಮದಿಯ ಸಂಚಾರಕ್ಕೆ ಪೊಲೀಸರು ಕಟಿಬದ್ಧವಾಗಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ನಾಯ್ಕ ತಿಳಿಸಿದರು.