ಸಾರಾಂಶ
ಬಾಳೆಹೊನ್ನೂರು: ಜರಿಕುಂಬ್ರಿ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಬಾಳೆಹೊನ್ನೂರು ಠಾಣಾ ಪೊಲೀಸರು ಒಂದು ಬೈಕ್ ಹಾಗೂ ಒಂದು ಸ್ಕೂಟಿ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಹುಣಸೇಹಳ್ಳಿ ಸಮೀಪದ ಜರಿಕುಂಬ್ರಿ ಗ್ರಾಮದ ಗಣೇಶ್ ಎಂಬುವರು ಇತ್ತೀಚೆಗೆ ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಬೈಕ್ ಕಳ್ಳತನ ಮಾಡಿದ್ದ ಚಂದನ್, ಆಸ್ಪೀನ್, ಜೀವನ್ ಎಂಬುವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ವಿಚಾರಣೆ ವೇಳೆ ಮೂವರು ಆರೋಪಿಗಳು ತಾವುಗಳು ಒಂದೂವರೆ ತಿಂಗಳ ಹಿಂದೆ ಮಡಿಕೇರಿಯ ವಿರಾಜಪೇಟೆ ಬಳಿಯಲ್ಲಿ ಸ್ಕೂಟಿಯೊಂದನ್ನು ಸಹ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದರು.ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ತನಿಖಾ ವಿಭಾಗದ ಪಿಎಸ್‌ಐ ಅಭಿಷೇಕ್, ಕಾನೂನು ವಿಭಾಗದ ಪಿಎಸ್‌ಐ ರವೀಶ್, ಸಿಬ್ಬಂದಿಗಳಾದ ಎಚ್.ಎಂ.ನಾಗರಾಜ್, ಮಂಜುನಾಥ, ಜಯರಾಮ್, ಯಾಕೂಬ್ ತಾಂಬೂಲಿ, ಬಿ.ಎಲ್.ಗೌಡ, ವಿನಯ್ ಭಾಗವಹಿಸಿದ್ದರು. ೦೩ಬಿಹೆಚ್‌ಆರ್ ೧: ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದಾರೆ.